IPL 2024: ಮಿಂಚಿನ ವೇಗದೊಂದಿಗೆ ತನ್ನದೇ ದಾಖಲೆ ಮುರಿದ ಮಯಾಂಕ್
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್-17 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಯುವ ವೇಗಿ ಮಯಾಂಕ್ ಯಾದವ್ ಸಂಚಲನ ಸೃಷ್ಟಿಸುತ್ತಿದ್ದಾರೆ. ಮೊದಲ ಪಂದ್ಯದಲ್ಲಿ 155.8 kmph ವೇಗದಲ್ಲಿ ಚೆಂಡೆಸೆದು ದಾಖಲೆ ಬರೆದಿದ್ದ ಮಯಾಂಕ್, ಇದೀಗ ತನ್ನದೇ ದಾಖಲೆಯನ್ನು ಮುರಿದು IPL 2024 ರಲ್ಲಿ ಅತೀ ವೇಗವಾಗಿ ಬೌಲಿಂಗ್ ಮಾಡಿದ ಹೊಸ ದಾಖಲೆ ಬರೆದಿದ್ದಾರೆ.
Updated on: Apr 03, 2024 | 6:53 AM

ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಯುವ ವೇಗಿ ಮಯಾಂಕ್ ಯಾದವ್ (Mayank Yadav).

ಈ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದ ಮಯಾಂಕ್ ಯಾದವ್ ನೀಡಿದ್ದು ಕೇವಲ 14 ರನ್ಗಳು ಮಾತ್ರ. ಇನ್ನು ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮರೋನ್ ಗ್ರೀನ್ ಹಾಗೂ ರಜತ್ ಪಾಟಿದಾರ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.

ಅದರಲ್ಲೂ ಕ್ಯಾಮರೋನ್ ಗ್ರೀನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಸಂಚಲನ ಸೃಷ್ಟಿಸಿದ್ದರು. 8ನೇ ಓವರ್ನ 4ನೇ ಎಸೆತವನ್ನು ಗ್ರೀನ್ ಗುರುತಿಸುವಷ್ಟರಲ್ಲಿ ವಿಕೆಟ್ ಅಲುಗಾಡಿತ್ತು, ಬೇಲ್ಸ್ ಎಗರಿತ್ತು. ಅಂತಹದೊಂದು ಬಿರುಗಾಳಿ ಎಸೆತವನ್ನು ಮಯಾಂಕ್ ಎಸೆದಿದ್ದರು.

ಅಂದರೆ ಆ ಎಸೆತದ ವೇಗ ಬರೋಬ್ಬರಿ 156.7 kmph. ಈ ಮೂಲಕ ಈ ಬಾರಿಯ ಐಪಿಎಲ್ನಲ್ಲಿ ಅತ್ಯಂತ ವೇಗವಾಗಿ ಚೆಂಡೆಸೆದ ದಾಖಲೆಯನ್ನು ಮಯಾಂಕ್ ಯಾದವ್ ನಿರ್ಮಿಸಿದ್ದಾರೆ. ಅದು ಕೂಡ ತನ್ನದೇ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಅಂದರೆ ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮಯಾಂಕ್ 155.8 kmph ವೇಗದಲ್ಲಿ ಚೆಂಡೆಸೆದಿದ್ದರು. ಇದೀಗ 156.7 kmph ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಚೆಂಡೆಸೆದ 4ನೇ ಬೌಲರ್ ಎನಿಸಿಕೊಂಡಿದ್ದಾರೆ.

ಇನ್ನು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಚೆಂಡೆಸೆದ ದಾಖಲೆ ಆಸ್ಟ್ರೇಲಿಯಾದ ಶಾನ್ ಟೈಟ್ ಹೆಸರಿನಲ್ಲಿದೆ. 2011 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಟೈಟ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 157.71 Kmph ವೇಗದಲ್ಲಿ ಚೆಂಡೆಸೆದು ದಾಖಲೆ ನಿರ್ಮಿಸಿದ್ದಾರೆ.

ಇದೀಗ ತಮ್ಮ ಎರಡನೇ ಪಂದ್ಯದ ಮೂಲಕ 156.7 kmph ವೇಗವನ್ನು ತಲುಪಿರುವ 21 ವರ್ಷದ ಯುವ ವೇಗಿ ಮಯಾಂಕ್ ಯಾದವ್, ಮುಂಬರುವ ಪಂದ್ಯಗಳ ಮೂಲಕ ಶಾನ್ ಟೈಟ್ ಅವರ ಭರ್ಜರಿ ದಾಖಲೆಯನ್ನು ಮುರಿದರೂ ಅಚ್ಚರಿಪಡಬೇಕಿಲ್ಲ.



















