ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರ 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮುಗ್ಗರಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಪರ ಕ್ವಿಂಟನ್ ಡಿಕಾಕ್ (81) ಅರ್ಧಶತಕ ಬಾರಿಸಿ ಮಿಂಚಿದರು.
ಇನ್ನು ಅಂತಿಮ ಓವರ್ಗಳ ವೇಳೆ ಅಬ್ಬರಿಸಿದ ನಿಕೋಲಸ್ ಪೂರನ್ 21 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ನೊಂದಿಗೆ 40 ರನ್ ಬಾರಿಸಿದರು. ಈ ಭರ್ಜರಿ ಬ್ಯಾಟಿಂಗ್ನೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ಪರ ಅಗ್ರ ದಾಂಡಿಗರು ವಿಫಲರಾದರು. ಇನ್ನು ಇಂಪ್ಯಾಕ್ ಪ್ಲೇಯರ್ ಆಗಿ ಕಣಕ್ಕಿಳಿದ ಮಹಿಪಾಲ್ ಲೋಮ್ರರ್ 13 ಎಸೆತಗಳಲ್ಲಿ 33 ರನ್ ಬಾರಿಸಿದ್ದು ಆರ್ಸಿಬಿ ಪರ ಸ್ಕೋರ್. ಅಂತಿಮವಾಗಿ 19.4 ಓವರ್ಗಳಲ್ಲಿ 153 ರನ್ಗಳಿಗೆ ಆಲೌಟ್ ಆಗುವ ಮೂಲಕ ಆರ್ಸಿಬಿ 28 ರನ್ಗಳ ಅಂತರದಿಂದ ಸೋಲೊಪ್ಪಿಕೊಂಡಿತು.
ಈ ಸೋಲಿನ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್, ನಮ್ಮ ತಂಡದ ಕಳಪೆ ಫೀಲ್ಡಿಂಗ್ ಸೋಲಿಗೆ ಮುಖ್ಯ ಕಾರಣ ಎಂದರು. ಈ ಪಂದ್ಯದ ಆರಂಭದಲ್ಲಿ ಕ್ವಿಂಟನ್ ಡಿಕಾಕ್ ಅವರ ಕ್ಯಾಚ್ ಅನ್ನು ಕೈಚೆಲ್ಲಿದ್ದರು. 32 ರನ್ಗಳಿದ್ದಾಗ ಅವರಿಗೆ ನೀಡಲಾದ ಜೀವದಾನವನ್ನು ಬಳಸಿಕೊಂಡ ಡಿಕಾಕ್ 81 ರನ್ ಬಾರಿಸಿ ಅಬ್ಬರಿಸಿದರು.
ಹಾಗೆಯೇ ಕೊನೆಯ ಹಂತದಲ್ಲಿ ನಿಕೋಲಸ್ ಪೂರನ್ ಅವರ ಕ್ಯಾಚ್ ಅನ್ನು ಸಹ ಕೈಬಿಟ್ಟಿದ್ದರು. ಕೇವಲ 2 ರನ್ಗಳಿಸಿದ್ದಾಗ ನೀಡಿದ ಅವಕಾಶವನ್ನು ಬಳಸಿಕೊಂಡ ಪೂರನ್ 40 ರನ್ ಸಿಡಿಸಿದ್ದರು. ಈ ಎರಡು ಕ್ಯಾಚ್ ಡ್ರಾಪ್ಗಳು ಆರ್ಸಿಬಿ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು ಎಂದು ಫಾಫ್ ಡುಪ್ಲೆಸಿಸ್ ತಿಳಿಸಿದ್ದಾರೆ.
ಇನ್ನು ಪವರ್ಪ್ಲೇನಲ್ಲಿ ಆರ್ಸಿಬಿ ಬೌಲರ್ಗಳ ಕಳಪೆ ದಾಳಿಯನ್ನು ಟೀಕಿಸಿರುವ ಫಾಫ್ ಡುಪ್ಲೆಸಿಸ್, ಹೊಸ ಚೆಂಡಿನೊಂದಿಗೆ ಆರ್ಸಿಬಿ ಬೌಲರ್ಗಳು ಮೊದಲ 4 ಓವರ್ಗಳಲ್ಲಿ 42 ರನ್ ಬಿಟ್ಟುಕೊಟ್ಟಿದ್ದರು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವು ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಆರ್ಸಿಬಿ ಬೌಲರ್ಗಳು ಅವಕಾಶ ನೀಡಿದ್ದರು ಎಂದು ಫಾಫ್ ದೂರಿದ್ದಾರೆ.
ಆರ್ಸಿಬಿ ಫೀಲ್ಡರ್ಗಳು ಮಾಡಿದ ತಪ್ಪು ಮತ್ತು ಬೌಲರ್ಗಳ ಕಳಪೆ ಪ್ರದರ್ಶನದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ದುಬಾರಿಯಾಗಿ ಪರಿಣಮಿಸಿದೆ. ಈ ಎಲ್ಲಾ ಕಾರಣಗಳಿಂದಾಗಿ ಆರ್ಸಿಬಿ ತಂಡವು ತವರಿನಲ್ಲಿ ಮತ್ತೊಮ್ಮೆ ಸೋಲುವಂತಾಯಿತು ಎಂದು ಫಾಫ್ ಡುಪ್ಲೆಸಿಸ್ ಹೇಳಿದ್ದಾರೆ.
Published On - 7:59 am, Wed, 3 April 24