IPL 2024: ಮುಂದಿನ ಪಂದ್ಯದಲ್ಲಿ RCBಗೆ ಕಠಿಣ ಎದುರಾಳಿ
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್-17 ರಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. IPL 2024 ರಲ್ಲಿ ನಾಲ್ಕು ಪಂದ್ಯಗಳಲ್ಲಿ ಆರ್ಸಿಬಿ ಗೆದ್ದಿರುವುದು ಕೇವಲ 1 ಮ್ಯಾಚ್ನಲ್ಲಿ ಮಾತ್ರ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದ ಆರ್ಸಿಬಿ ಉಳಿದ 3 ಮ್ಯಾಚ್ನಲ್ಲಿ ಸೋಲನುಭವಿಸಿದೆ.
Updated on: Apr 03, 2024 | 9:03 AM

4 ಪಂದ್ಯಗಳು... ಮೂರು ಸೋಲು... ಅದರಲ್ಲಿ ತವರು ಮೈದಾನದಲ್ಲಿ 2 ಹೀನಾಯ ಸೋಲು... ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರ ಆರಂಭಿಕ ಪಂದ್ಯಗಳಲ್ಲೇ ಆರ್ಸಿಬಿ ಕಳಪೆ ಪ್ರದರ್ಶನ ನೀಡಿದೆ. ಮೊದಲ ಮ್ಯಾಚ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿದ್ದ ಆರ್ಸಿಬಿ, ಆ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿತ್ತು.

ಆದರೆ ಇದಾದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಆರ್ಸಿಬಿ, ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಹೀನಾಯವಾಗಿ ಸೋತಿದೆ. ಈ ಸೋಲಿನೊಂದಿಗೆ ಪ್ರಸ್ತುತ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಅಲಂಕರಿಸಿದೆ. ಇನ್ನು ಆರ್ಸಿಬಿ ತಂಡವು ಗೆಲುವಿನ ಲಯಕ್ಕೆ ಮರಳು ಏಪ್ರಿಲ್ 6 ರ ತನಕ ಕಾಯಲೇಬೇಕು.

ಏಕೆಂದರೆ ಆರ್ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 6 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. ಆದರೆ ಈ ಪಂದ್ಯ ನಡೆಯಲಿರುವುದು ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಎಂಬುದು ವಿಶೇಷ. ಅಂದರೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಅವರ ತವರು ಮೈದಾನದಲ್ಲಿ ಆರ್ಸಿಬಿ ಎದುರಿಸಬೇಕಿದೆ.

ಈಗಾಗಲೇ ಬಲಿಷ್ಠ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿಗೆ ಸೋಲುಣಿಸಿರುವ ರಾಜಸ್ಥಾನ್ ರಾಯಲ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇತ್ತ ಆರ್ಸಿಬಿ ತಂಡವು ಮೂರು ಸೋಲು ಹಾಗೂ 1 ಜಯದೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 9ನೇ ಸ್ಥಾನದಲ್ಲಿದೆ.

ಹೀಗಾಗಿ ಎಲ್ಲಾ ರೀತಿಯಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಾಜಸ್ಥಾನ್ ರಾಯಲ್ಸ್ ಕಡೆಯಿಂದ ಕಠಿಣ ಪೈಪೋಟಿ ಎದುರಾಗಲಿದೆ. ಅದರಲ್ಲೂ ಕಳಪೆ ಫಾರ್ಮ್ನಲ್ಲಿರುವ ಆರ್ಸಿಬಿ ಬ್ಯಾಟರ್ಗಳು ರಾಜಸ್ಥಾನ್ ರಾಯಲ್ಸ್ ತಂಡದ ಬಲಿಷ್ಠ ಬೌಲಿಂಗ್ ಲೈನಪ್ ಅನ್ನು ಹೇಗೆ ಎದುರಿಸಲಿದೆ ಎಂಬುದೇ ಈಗ ಪ್ರಶ್ನೆ.
