IPL 2024: RCB vs DC ಮ್ಯಾಚ್ ಫಿಕ್ಸ್: ನೆಟ್ಟಿಗರ ಗಂಭೀರ ಆರೋಪ..!
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2024) 62ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಒಟ್ಟು 4 ಕ್ಯಾಚ್ಗಳನ್ನು ಕೈಚೆಲ್ಲಿದ್ದಾರೆ. ಒಂದು ವೇಳೆ ಈ ಕ್ಯಾಚ್ಗಳನ್ನು ಹಿಡಿದಿದ್ದರೆ ಆರ್ಸಿಬಿ ತಂಡವನ್ನು ಕೇವಲ 150 ರನ್ಗಳ ಒಳಗೆ ನಿಯಂತ್ರಿಸಬಹುದಿತ್ತು ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ. ಅಂದರೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ಕಳಪೆ ಫೀಲ್ಡಿಂಗ್ ಮುಳುವಾಗಿದೆ. ಇದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರ ಈ ಕಳಪೆಯಾಟದ ಬಗ್ಗೆ ಗಂಭೀರ ಆರೋಪಗಳು ಕೂಡ ಕೇಳಿ ಬರಲಾರಂಭಿಸಿದೆ.
Updated on: May 13, 2024 | 10:52 AM

IPL 2024: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಪಿಎಲ್ನ 62ನೇ ಪಂದ್ಯದಲ್ಲಿ ಆರ್ಸಿಬಿ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಂಗಾಮಿ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಆದರೆ ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ಫೀಲ್ಡರ್ಗಳು ಬರೋಬ್ಬರಿ 4 ಕ್ಯಾಚ್ಗಳನ್ನು ಕೈಚೆಲ್ಲಿದ್ದರು ಎಂಬುದೇ ಆಶ್ಚರ್ಯ.

9ನೇ ಓವರ್ನ 2ನೇ ಎಸೆತದಲ್ಲಿ ವಿಲ್ ಜಾಕ್ಸ್ ನೀಡಿದ ಕ್ಯಾಚ್ ಅನ್ನು ಅಕ್ಷರ್ ಪಟೇಲ್ ಕೈಚೆಲ್ಲಿದ್ದರು. ಇದೇ ಓವರ್ನ 5ನೇ ಎಸೆತದಲ್ಲಿ ರಜತ್ ಪಾಟಿದಾರ್ ಅವರ ಕ್ಯಾಚ್ ಅನ್ನು ಶಾಯ್ ಹೋಪ್ ಕೈಬಿಟ್ಟಿದ್ದರು.

ಇನ್ನು 10ನೇ ಓವರ್ನ 4ನೇ ಎಸೆತದಲ್ಲಿ ಜಾಕ್ಸ್ ಬಾರಿಸಿದ ಚೆಂಡನ್ನು ಹಿಡಿಯುವಲ್ಲಿ ಟ್ರಿಸ್ಟಾನ್ ಸ್ಟಬ್ಸ್ ವಿಫಲರಾಗಿದ್ದರು. ಹಾಗೆಯೇ 10ನೇ ಓವರ್ನ ಮೊದಲ ಎಸೆತದಲ್ಲಿ ರಜತ್ ಪಾಟಿದಾರ್ ನೀಡಿದ ಸುಲಭ ಕ್ಯಾಚ್ ಅನ್ನು ಅಕ್ಷರ್ ಪಟೇಲ್ ಕೈಚೆಲ್ಲಿದ್ದರು.

ಅಂದರೆ ಕೇವಲ 2 ಓವರ್ಗಳ ಅಂತರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫೀಲ್ಡರ್ಗಳು 4 ಕ್ಯಾಚ್ಗಳನ್ನು ಕೈಚೆಲ್ಲಿದ್ದಾರೆ. ಇದೇ ಕಾರಣದಿಂದ ಇದೀಗ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವು ಫಿಕ್ಸ್ ಆಗಿತ್ತಾ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಇದೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪೋಟಕ ದಾಂಡಿಗ ಟ್ರಿಸ್ಟಾನ್ ಸ್ಟಬ್ಸ್ ರನೌಟ್ ಆದ ರೀತಿ ಕೂಡ ಈ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ. ಏಕೆಂದರೆ ಸ್ಟ್ರೈಕ್ನಲ್ಲಿದ್ದ ಅಕ್ಷರ್ ಪಟೇಲ್ ರನ್ ಕರೆ ನೀಡದಿದ್ದರೂ ಸ್ಟಬ್ಸ್ ಪಿಚ್ನ ಮಧ್ಯ ಭಾಗದವರೆಗೂ ಓಡಿದ್ದು ಯಾಕೆ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.

ಒಂದೆಡೆ 4 ಕ್ಯಾಚ್ಗಳ ಡ್ರಾಪ್, ಮತ್ತೊಂದೆಡೆ ಸುಲಭ ರನೌಟ್ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಅದರಲ್ಲೂ ಅತ್ಯುತ್ತಮ ಫೀಲ್ಡರ್ ಎನಿಸಿಕೊಂಡಿರುವ ಅಕ್ಷರ್ ಪಟೇಲ್ 2 ಸುಲಭ ಕ್ಯಾಚ್ಗಳನ್ನು ಕೈಚೆಲ್ಲಿರುವುದು ಅಚ್ಚರಿ. ಹೀಗಾಗಿಯೇ RCB - DC ನಡುವಣ ಪಂದ್ಯ ಫಿಕ್ಸ್ ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ.



















