- Kannada News Photo gallery Cricket photos IPL 2024: Punjab Kings records highest successful chase in T20
IPL 2024: ಪಂಜಾಬ್ ಕಿಂಗ್ಸ್ ವಿಶ್ವ ದಾಖಲೆಯ ಚೇಸಿಂಗ್..!
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್ 2024) ಪಂಜಾಬ್ ಕಿಂಗ್ಸ್ ಹೊಸ ಇತಿಹಾಸ ನಿರ್ಮಿಸಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 262 ರನ್ಗಳನ್ನು ಚೇಸ್ ಮಾಡುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ಗಳನ್ನು ಬೆನ್ನತ್ತಿ ಗೆದ್ದ ತಂಡ ಎಂಬ ಹಿರಿಮೆಗೆ ಪಾತ್ರವಾಗಿದೆ. ಹಾಗೆಯೇ ಈ ಪಂದ್ಯದ ಮೂಲಕ ಹಳೆಯ ದಾಖಲೆಗಳನ್ನು ಸಹ ಪಂಜಾಬ್ ಕಿಂಗ್ಸ್ ಅಳಿಸಿ ಹಾಕಿದೆ.
Updated on: Apr 27, 2024 | 7:37 AM

ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 42ನೇ ಪಂದ್ಯದ ಮೂಲಕ ಪಂಜಾಬ್ ಕಿಂಗ್ಸ್ (Punjab Kings) ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆದಿದೆ. ಅದು ಕೂಡ 262 ರನ್ಗಳನ್ನು ಚೇಸ್ ಮಾಡುವ ಮೂಲಕ ಎಂಬುದು ವಿಶೇಷ.

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕೆಕೆಆರ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 261 ರನ್ ಕಲೆಹಾಕಿತು.

262 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಆರಂಭಿಕರಾದ ಪ್ರಭ್ಸಿಮ್ರಾನ್ ಸಿಂಗ್ (50) ಹಾಗೂ ಜಾನಿ ಬೈರ್ಸ್ಟೋವ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಅದರಂತೆ ಸ್ಫೋಟಕ ಇನಿಂಗ್ಸ್ ಆಡಿದ ಬೈರ್ಸ್ಟೋವ್ 45 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

ಇನ್ನು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಶಾಂಕ್ ಸಿಂಗ್ (68) ಕೂಡ ಜಾನಿ ಬೈರ್ಸ್ಟೋವ್ (108) ಜೊತೆಗೂಡಿ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ ಕೇವಲ 18.4 ಓವರ್ಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವು 2 ವಿಕೆಟ್ ಕಳೆದುಕೊಂಡು 262 ರನ್ಗಳ ಗುರಿ ಮುಟ್ಟಿತು. ಈ ಮೂಲಕ ಪಂಜಾಬ್ ಪಡೆ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

ವಿಶೇಷ ಎಂದರೆ ಈ ಚೇಸಿಂಗ್ನೊಂದಿಗೆ ಪಂಜಾಬ್ ಕಿಂಗ್ಸ್ ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆದಿದೆ. ಅಂದರೆ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಬೆನ್ನಟ್ಟಿ ಗೆದ್ದ ತಂಡ ದಾಖಲೆ ಇದೀಗ ಪಂಜಾಬ್ ಕಿಂಗ್ಸ್ ಪಾಲಾಗಿದೆ.

ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಸೌತ್ ಆಫ್ರಿಕಾ ತಂಡದ ಹೆಸರಿನಲ್ಲಿತ್ತು. 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 259 ರನ್ಗಳನ್ನು ಚೇಸ್ ಮಾಡುವ ಮೂಲಕ ಸೌತ್ ಆಫ್ರಿಕಾ ತಂಡ ಈ ವಿಶ್ವ ದಾಖಲೆ ಬರೆದಿತ್ತು. ಇದೀಗ ದಾಖಲೆಯನ್ನು ಮುರಿಯುವಲ್ಲಿ ಪಂಜಾಬ್ ಕಿಂಗ್ಸ್ ಯಶಸ್ವಿಯಾಗಿದೆ.

262 ರನ್ಗಳನ್ನು ಚೇಸ್ ಮಾಡಿ ಪಂಜಾಬ್ ಕಿಂಗ್ಸ್ ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದಿದೆ. ಹಾಗೆಯೇ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 224 ರನ್ಗಳನ್ನು ಚೇಸ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ದಾಖಲೆಯನ್ನು ಈ ಪಂದ್ಯದ ಮೂಲಕ ಪಂಜಾಬ್ ಕಿಂಗ್ಸ್ ತಂಡವೇ ಅಳಿಸಿ ಹಾಕಿರುವುದು ವಿಶೇಷ.



















