ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್-17 ಮುಕ್ತಾಯದ ಬೆನ್ನಲ್ಲೇ ಟಿ20 ವಿಶ್ವಕಪ್ ಶುರುವಾಗಲಿದೆ. ಜೂನ್ 1 ರಿಂದ ಆರಂಭವಾಗಲಿರುವ ಚುಟುಕು ಕ್ರಿಕೆಟ್ ಕದನಕ್ಕಾಗಿ ಎಲ್ಲಾ ತಂಡಗಳು ಮೇ 1 ರೊಳಗೆ ತಮ್ಮ ತಂಡಗಳನ್ನು ಪ್ರಕಟಿಸಬೇಕಿದೆ. ಇದಕ್ಕಾಗಿ ಬಿಸಿಸಿಐ ಕೆಲ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಈ ಪಟ್ಟಿಯಲ್ಲಿ ರಿಷಭ್ ಪಂತ್ ಅವರ ಹೆಸರು ಕೂಡ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಪ್ರಸ್ತುತ ಮಾಹಿತಿ ಪ್ರಕಾರ, ಟಿ20 ವಿಶ್ವಕಪ್ ಭಾರತ ತಂಡದಲ್ಲಿ ರಿಷಭ್ ಪಂತ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಏಕೆಂದರೆ ಅಪಘಾತದ ಬಳಿಕ ಒಂದು ವರ್ಷದಿಂದ ಹೊರಗುಳಿದಿದ್ದ ಪಂತ್ ಇದೀಗ ಐಪಿಎಲ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ.
ಆಡಿರುವ 5 ಪಂದ್ಯಗಳಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿದಿರುವ ರಿಷಭ್ ಪಂತ್ 154.55ರ ಸ್ಟ್ರೈಕ್ ರೇಟ್ನಲ್ಲಿ 153 ರನ್ ಕಲೆಹಾಕಿದ್ದಾರೆ. ಈ ವೇಳೆ 2 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಈ ಮೂಲಕ ಭರ್ಜರಿ ಪ್ರದರ್ಶನ ನೀಡಿರುವ ಪಂತ್ಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲು ಬಿಸಿಸಿಐ ಚಿಂತಿಸಿದೆ.
ಇತ್ತ ರಿಷಭ್ ಪಂತ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿರುವುದರಿಂದ, ಕೆಎಲ್ ರಾಹುಲ್ ಹಾಗೂ ಜಿತೇಶ್ ಶರ್ಮಾಗೆ ಟಿ20 ವಿಶ್ವಕಪ್ ತಂಡದಲ್ಲಿ ಚಾನ್ಸ್ ಸಿಗುವುದು ಅನುಮಾನ. ಇನ್ನು ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಮುಂಬರುವ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೆ, ಇಬ್ಬರಲ್ಲಿ ಒಬ್ಬರು 2ನೇ ವಿಕೆಟ್ ಆಗಿ ಆಯ್ಕೆಯಾಗಬಹುದು.
ಒಟ್ಟಿನಲ್ಲಿ ಒಂದು ವರ್ಷದ ಬಳಿಕ ಮೈದಾನಕ್ಕಿಳಿದಿರುವ ರಿಷಭ್ ಪಂತ್ ತಮ್ಮ ಹಳೆಯ ಬ್ಯಾಟಿಂಗ್ ವೈಭವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದು, ಇದರ ಫಲವಾಗಿ ಇದೀಗ ಮತ್ತೊಮ್ಮೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿ ನಿಂತಿದ್ದಾರೆ. ಅದರಂತೆ ಮುಂಬರುವ ಟಿ20 ವಿಶ್ವಕಪ್ ಮೂಲಕ ಪಂತ್ ರಿಎಂಟ್ರಿ ಕೊಡಲಿರುವುದು ಖಚಿತ ಎಂದೇ ಹೇಳಬಹುದು.