IPL 2024: 204 ರನ್ ಚಚ್ಚಿದ SRH: ಒಂದೇ ಒಂದು ಬೌಂಡರಿ ನೀಡದ ಸುನಿಲ್ ನರೈನ್
IPL 2024: ಐಪಿಎಲ್ 2024 ರ ಮೂರನೇ ಪಂದ್ಯದಲ್ಲಿ ರಣರೋಚಕ ಪೈಪೋಟಿ ಕಂಡು ಬಂದಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವಣ ಈ ಪಂದ್ಯದಲ್ಲಿ ಮೂಡಿಬಂದ ಒಟ್ಟು ಸ್ಕೋರ್ ಬರೋಬ್ಬರಿ 412 ರನ್ಗಳು. ಇದಾಗ್ಯೂ ಐಪಿಎಲ್ನ ಈ ಪಂದ್ಯದಲ್ಲಿ ಕೆಕೆಆರ್ ಸ್ಪಿನ್ನರ್ ಸುನಿಲ್ ನರೈನ್ ಒಂದೇ ಒಂದು ಬೌಂಡರಿ ನೀಡಿಲ್ಲ ಎಂಬುದು ವಿಶೇಷ.
Updated on: Mar 24, 2024 | 8:53 AM

ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ KKR ಮತ್ತು SRH ನಡುವಣ ಪಂದ್ಯದಲ್ಲಿ ರನ್ ಮಳೆಯೇ ಹರಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆರಂಭಿಕ ಆಟಗಾರ ಫಿಲ್ ಸಾಲ್ಟ್ (54) ಹಾಗೂ ಆ್ಯಂಡ್ರೆ ರಸೆಲ್ (64) ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಕಗಳ ನೆರವಿನಿಂದ ಕೆಕೆಆರ್ ತಂಡವು 7 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿತು.

ಈ ಕಠಿಣ ಗುರಿಯನ್ನು ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ದಿಟ್ಟ ಪ್ರದರ್ಶನ ನೀಡಿತು. ಅದರಲ್ಲೂ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆನ್ರಿಕ್ ಕ್ಲಾಸೆನ್ (63) ಸ್ಪೋಟಕ ಅರ್ಧಶತಕ ಸಿಡಿಸಿ ಅಬ್ಬರಿಸಿದರು. ಇದಾಗ್ಯೂ ಅಂತಿಮ ಓವರ್ ವೇಳೆ ಎಡವಿದ SRH ತಂಡವು 204 ರನ್ಗಳಿಸಿ 4 ರನ್ಗಳಿಂದ ಸೋಲೊಪ್ಪಿಕೊಂಡಿತು.

ಅಂದರೆ ಈ ಪಂದ್ಯದಲ್ಲಿ ಮೂಡಿಬಂದ ಒಟ್ಟು ಸ್ಕೋರ್ 412 ರನ್ಗಳು. ಇದರಲ್ಲಿ SRH ತಂಡವು 204 ರನ್ ಕಲೆಹಾಕಿದರೂ, ಕೆಕೆಆರ್ ಸ್ಪಿನ್ನರ್ ಸುನಿಲ್ ನರೈನ್ ನೀಡಿದ್ದು ಕೇವಲ 19 ರನ್ಗಳು ಮಾತ್ರ. ಅಂದರೆ 4 ಓವರ್ಗಳಲ್ಲಿ ನರೈನ್ 4.80 ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟು 1 ವಿಕೆಟ್ ಪಡೆದು ಮಿಂಚಿದರು.

ವಿಶೇಷ ಎಂದರೆ ಸನ್ರೈಸರ್ಸ್ ಹೈದರಾಬಾದ್ ತಂಡವು 204 ರನ್ಗಳನ್ನು ಬಾರಿಸಿದರೂ ಸುನಿಲ್ ನರೈನ್ ಮಾತ್ರ ಒಂದೇ ಒಂದು ಬೌಂಡರಿ ಬಿಟ್ಟು ಕೊಟ್ಟಿಲ್ಲ. ಅಂದರೆ ನರೈನ್ ಓವರ್ನಲ್ಲಿ ಎಸ್ಆರ್ಹೆಚ್ ತಂಡದ ಯಾವುದೇ ಬ್ಯಾಟ್ಸ್ಮನ್ಗೆ ಸಿಕ್ಸ್ ಅಥವಾ ಫೋರ್ ಬಾರಿಸಲು ಸಾಧ್ಯವಾಗಿಲ್ಲ. ಇದುವೇ ಕೆಕೆಆರ್ ತಂಡದ ಗೆಲುವಿಗೆ ಟರ್ನಿಂಗ್ ಪಾಯಿಂಟ್ ಎಂದರೆ ತಪ್ಪಾಗಲಾರದು.

ಒಟ್ಟಿನಲ್ಲಿ ಬೃಹತ್ ಮೊತ್ತದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಒಂದೇ ಒಂದು ಬೌಂಡರಿ ಹೊಡೆಸಿಕೊಳ್ಳದ ವಿಶೇಷ ದಾಖಲೆಯೊಂದನ್ನು ಸುನಿಲ್ ನರೈನ್ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಐಪಿಎಲ್ ಸೀಸನ್ 17 ಅಭಿಯಾನವನ್ನು ನರೈನ್ ಅದ್ಭುತವಾಗಿ ಆರಂಭಿಸಿದ್ದು, ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ಅನುಭವಿ ಸ್ಪಿನ್ನರ್ ಕಡೆಯಿಂದ ಸ್ಪಿನ್ ಮೋಡಿಯನ್ನು ನಿರೀಕ್ಷಿಸಬಹುದು.
