IPL 2024: RCB… ಇದು ಕಿಂಗ್ ಕೊಹ್ಲಿಯ ಕಿಂಗ್ಡಮ್
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 17ನೇ ಆವೃತ್ತಿ ಮಾರ್ಚ್ 22 ರಿಂದ ಶುರುವಾಗಲಿದೆ. ಈ ಬಾರಿಯ ಐಪಿಎಲ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಚೆನ್ನೈನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಆರ್ಸಿಬಿ ಪರ 17 ವರ್ಷ ಆಡಿದ ದಾಖಲೆ ಬರೆಯಲಿದ್ದಾರೆ.
Updated on: Mar 11, 2024 | 8:53 AM

ಮಾರ್ಚ್ 11, 2008... ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ನ (IPL) ಹರಾಜು ಪ್ರಕ್ರಿಯೆ. ಈ ಹರಾಜಿನ 2ನೇ ದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯು ಅಂಡರ್-19 ಆಟಗಾರರ ಪಟ್ಟಿಯಿಂದ ವಿರಾಟ್ ಕೊಹ್ಲಿಯನ್ನು (Virat Kohli) ಆಯ್ಕೆ ಮಾಡಿಕೊಂಡಿತ್ತು. ಇದಾದ ಬಳಿಕ ನಡೆದಿದ್ದು ಇತಿಹಾಸ.

ಇದೀಗ ಈ ಆಯ್ಕೆಗೆ 16 ವರ್ಷಗಳು ತುಂಬಿವೆ. ಅಂದರೆ ವಿರಾಟ್ ಕೊಹ್ಲಿ ಆರ್ಸಿಬಿ ತಂಡಕ್ಕೆ ಆಯ್ಕೆಯಾಗಿ ಬರೋಬ್ಬರಿ 16 ವರ್ಷಗಳಾಗಿವೆ. ಈ ಹದಿನಾರು ವರ್ಷಗಳಲ್ಲಿ ವಿರಾಟ್ ಕಿಂಗ್ ಕೊಹ್ಲಿಯಾಗಿ ಬದಲಾಗಿದ್ದಾರೆ. ಅದರಲ್ಲೂ ಒಂದೇ ಫ್ರಾಂಚೈಸಿ ಪರ ಕಣಕ್ಕಿಳಿಯುವ ಮೂಲಕ ತಮ್ಮ ನಿಷ್ಠೆಯನ್ನು ಪ್ರದರ್ಶಿಸಿದ್ದಾರೆ.

ಈ ನಿಷ್ಠೆಯೊಂದಿಗೆ ವಿಶ್ವ ದಾಖಲೆಯನ್ನು ನಿರ್ಮಿಸಿರುವುದು ವಿಶೇಷ. ಅಂದರೆ ಲೀಗ್ ಕ್ರಿಕೆಟ್ನಲ್ಲಿ ಒಂದೇ ಫ್ರಾಂಚೈಸಿ ಪರ 16 ವರ್ಷಗಳ ಕಾಲ ಆಡಿದ ವಿಶ್ವದ ಏಕೈಕ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಐಪಿಎಲ್ನಲ್ಲಿ 8 ಆಟಗಾರರು ಒಂದೇ ಫ್ರಾಂಚೈಸಿ ಪರ ಆಡಿದ ದಾಖಲೆ ಹೊಂದಿದ್ದಾರೆ.

ಆದರೆ ಅವರು ಯಾರು ಕೂಡ ಒಂದೇ ತಂಡದ ಪರ 15 ವರ್ಷಗಳ ಕಾಲ ಆಡಿಲ್ಲ ಎಂಬುದು ವಿಶೇಷ. ಇದೀಗ ಆರ್ಸಿಬಿ ಪರ 17ನೇ ಸೀಸನ್ನಲ್ಲಿ ಕಣಕ್ಕಿಳಿಯಲು ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ. ಈ ಮೂಲಕ ಕ್ರಿಕೆಟ್ ಲೀಗ್ ಇತಿಹಾಸದಲ್ಲೇ ಒಂದೇ ತಂಡದ ಪರ ಹದಿನೇಳು ವರ್ಷಗಳನ್ನಾಡಿದ ವಿಶೇಷ ದಾಖಲೆ ಬರೆಯಲಿದ್ದಾರೆ.

2008 ರ ಏಪ್ರಿಲ್ 18 ರಂದು ಆರ್ಸಿಬಿ ಪರ ಚೊಚ್ಚಲ ಪಂದ್ಯವನ್ನಾಡಿರುವ ವಿರಾಟ್ ಕೊಹ್ಲಿ ಇದುವರೆಗೆ 237 ಐಪಿಎಲ್ ಮ್ಯಾಚ್ಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ 7 ಶತಕ ಹಾಗೂ 50 ಅರ್ಧಶತಕಗಳೊಂದಿಗೆ ಒಟ್ಟು 7263 ರನ್ ಕಲೆಹಾಕಿದ್ದಾರೆ.

ವಿಶೇಷ ಎಂದರೆ ಒಂದೇ ತಂಡದ ಪರ ಕಣಕ್ಕಿಳಿದು ಟಿ20 ಕ್ರಿಕೆಟ್ ಲೀಗ್ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ, ಅತ್ಯಧಿಕ ಶತಕ ಸಿಡಿಸಿದ, ಅತೀ ಹೆಚ್ಚು ಅರ್ಧಶತಕ ಗಳಿಸಿದ ವಿಶ್ವ ದಾಖಲೆ ಕೂಡ ಕಿಂಗ್ ಕೊಹ್ಲಿ ಹೆಸರಿನಲ್ಲಿದೆ. ಈ ಮೂಲಕ ಆರ್ಸಿಬಿ ಸಾಮ್ರಾಜ್ಯದಲ್ಲಿ ವಿರಾಟ್ ಕೊಹ್ಲಿ ರಾಜಾಧಿರಾಜನಾಗಿ ಮೆರೆಯುತ್ತಿದ್ದಾರೆ. ಅದು ಕೂಡ 16 ವರ್ಷಗಳ ನಿಷ್ಠೆಯೊಂದಿಗೆ ಎಂಬುದೇ ಇಲ್ಲಿ ವಿಶೇಷ.
