IPL 2024: ಔಟ್ ಮಾಡಿದ ಬೌಲರ್ಗೆ ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ
IPL 2024 RCB vs GT: ಐಪಿಎಲ್ 2024 ರ 52ನೇ ಪಂದ್ಯದಲ್ಲಿ ಟಾಸ್ ಗೆದ್ದ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 147 ರನ್ಗಳಿಸಿ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ತಂಡವು 13.4 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
Updated on: May 05, 2024 | 1:09 PM

ಐಪಿಎಲ್ನಲ್ಲಿ (IPL 2024) ಶನಿವಾರ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರ್ಸಿಬಿ ತಂಡ ಜಯ ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಗುಜರಾತ್ ಟೈಟಾನ್ಸ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ಕಲೆಹಾಕಿದ್ದು ಕೇವಲ 147 ರನ್ಗಳು ಮಾತ್ರ.

148 ರನ್ಗಳ ಗುರಿ ಪಡೆದ ಆರ್ಸಿಬಿ ತಂಡಕ್ಕೆ ಫಾಫ್ ಡುಪ್ಲೆಸಿಸ್ (64) ಹಾಗೂ ವಿರಾಟ್ ಕೊಹ್ಲಿ (42) ಉತ್ತಮ ಆರಂಭ ಒದಗಿಸಿದ್ದರು. ಇದರ ನಡುವೆ ಅರ್ಧಶತಕದತ್ತ ಸಾಗಿದ್ದ ಕೊಹ್ಲಿಯನ್ನು ಔಟ್ ಮಾಡುವಲ್ಲಿ ಸ್ಪಿನ್ನರ್ ನೂರ್ ಅಹ್ಮದ್ ಯಶಸ್ವಿಯಾಗಿದ್ದರು.

ನೂರ್ ಅಹ್ಮದ್ ಎಸೆದ 11ನೇ ಓವರ್ನ 4ನೇ ಎಸೆತವನ್ನು ಕೊಹ್ಲಿ ಕವರ್ಸ್ನತ್ತ ಬಾರಿಸಲು ಯತ್ನಿಸಿದ್ದರು. ಆದರೆ ಚೆಂಡು ಬ್ಯಾಟ್ ಅನ್ನು ಸವರಿ ವಿಕೆಟ್ ಕೀಪರ್ ಕೈ ಸೇರಿತು. ಇತ್ತ ಕಿಂಗ್ ಕೊಹ್ಲಿಯ ವಿಕೆಟ್ ಸಿಗುತ್ತಿದ್ದಂತೆ ನೂರ್ ಅಹ್ಮದ್ ಕುಣಿದು ಕುಪ್ಪಳಿಸಿದರು.

ಏಕೆಂದರೆ ನೂರ್ ಅಹ್ಮದ್ ಅವರ ನೆಚ್ಚಿನ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಇದೇ ಮೊದಲ ಬಾರಿಗೆ ತನ್ನ ಫೇವರೇಟ್ ಕ್ರಿಕೆಟಿಗನ ವಿಕೆಟ್ ಪಡೆದ ನೂರ್ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಇದೀಗ ಈ ಸಂತಸವನ್ನು ವಿರಾಟ್ ಕೊಹ್ಲಿ ಇಮ್ಮಡಿಗೊಳಡಿಸಿದ್ದಾರೆ.

ಪಂದ್ಯದ ಬಳಿಕ ಕಿಂಗ್ ಕೊಹ್ಲಿ ತಮ್ಮ ಜೆರ್ಸಿಯನ್ನು ನೂರ್ ಅಹ್ಮದ್ಗೆ ನೀಡಿದ್ದಾರೆ. ಅದ್ಭುತವಾಗಿ ಬೌಲಿಂಗ್ ಮಾಡಿದ್ದೀಯ, ಒಳ್ಳೆಯದಾಗಲಿ ಎಂದು ಆಟೋಗ್ರಾಫ್ನೊಂದಿಗೆ ಕೊಹ್ಲಿ ಅಫ್ಘಾನ್ ಸ್ಪಿನ್ನರ್ಗೆ ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ಉಡುಗೊರೆಯ ಫೋಟೋವನ್ನು ಗುಜರಾತ್ ಟೈಟಾನ್ಸ್ ತಂಡದ ಸ್ಪಿನ್ನರ್ ನೂರ್ ಅಹ್ಮದ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನೀವು ಯಾವತ್ತೂ ನನ್ನ ನೆಚ್ಚಿನವರಲ್ಲಿ ಒಬ್ಬರು ಎಂದು ವಿರಾಟ್ ಕೊಹ್ಲಿಗೆ ಧನ್ಯವಾದ ತಿಳಿಸಿದ್ದಾರೆ.
