ತಮ್ಮ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಮಾಡಿರುವ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ದಾಖಲೆಯ 6ನೇ ಬಾರಿಗೆ ತಂಡವನ್ನು ಚಾಂಪಿಯನ್ ಮಾಡುವ ಗುರಿಯೊಂದಿಗೆ 17 ನೇ ಆವೃತ್ತಿಯ ಐಪಿಎಲ್ಗೆ ಈಗಾಗಲೇ ತಯಾರಿ ನಡೆಸಿದ್ದಾರೆ.
ಮಾರ್ಚ್ 22 ರಿಂದ ಪ್ರಾರಂಭವಾಗುವ ಈ ಟೂರ್ನಿಯ ಮೊದಲ ಪಂದ್ಯ ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವೆ ನಡೆಯಲಿದೆ. ಆದರೆ ಅದಕ್ಕೂ ಮುಂಚೆ ವರ್ಷಗಳ ಕಾಲ ಸಿಎಸ್‌ಕೆ ತಂಡವನ್ನು ಪ್ರತಿನಿಧಿಸಿದ್ದ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಶಾಕಿಂಗ್ ಹೇಳಿಕೆ ನೀಡಿದ್ದು, ಈ ಬಾರಿಯ ಐಪಿಎಲ್ ಮಧ್ಯದಲ್ಲಿ ಧೋನಿ ತಂಡದ ನಾಯಕತ್ವವನ್ನು ತೊರೆಯಬಹುದು ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಯುಡು, ಪಂದ್ಯಾವಳಿಯಲ್ಲಿ ಕೆಲವು ಪಂದ್ಯಗಳ ನಂತರ ಧೋನಿ ಸಿಎಸ್‌ಕೆ ತಂಡದ ನಾಯಕತ್ವವನ್ನು ತೊರೆಯಬಹುದು ಮತ್ತು ತಂಡದ ನಾಯಕತ್ವವನ್ನು ಬೇರೆ ಆಟಗಾರನಿಗೆ ಹಸ್ತಾಂತರಿಸಬಹುದು. ಐಪಿಎಲ್ 17ನೇ ಸೀಸನ್ ಬಳಿಕ ಧೋನಿ ಈ ಸ್ವರೂಪಕ್ಕೆ ವಿದಾಯ ಹೇಳುವ ಸಾಧ್ಯತೆಯೂ ಇದೆ ಎಂದಿದ್ದಾರೆ.
ಧೋನಿ 15 ಆಗಸ್ಟ್ 2020 ರಂದು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಆದರೆ ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರೆಸಿದರು. ಕ್ರೀಡಾ ವಾಹಿನಿಯೊಂದರ ಜೊತೆ ಮಾತನಾಡಿದ ರಾಯುಡು, ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿಯಲ್ಲಿರುವುದರಿಂದ ಧೋನಿ ಈ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಅಲ್ಲದೆ ಸೀಸನ್ ಮಧ್ಯದಲ್ಲಿ ಮತ್ತೊಬ್ಬ ಆಟಗಾರನಿಗೆ ನಾಯಕನಾಗಿ ಬಡ್ತಿ ನೀಡಬಹುದು ಎಂದಿದ್ದಾರೆ.
ರಾಯುಡು ಪ್ರಕಾರ, ಧೋನಿ ಐಪಿಎಲ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದರೆ ಈ ಸೀಸನ್, ಐದು ಬಾರಿಯ ಚಾಂಪಿಯನ್ ಚೆನ್ನೈ ತಂಡಕ್ಕೆ ಬದಲಾವಣೆಯ ಅವಧಿಯಾಗಲಿದೆ. ಒಂದು ವೇಳೆ ಧೋನಿ ಮತ್ತಷ್ಟು ಕ್ರಿಕೆಟ್ ಆಡಲು ಬಯಸಿದರೆ, ಅವರು ಇನ್ನೂ ಕೆಲವು ಸೀಸನ್ ಆಡಬಹುದು. ಹಾಗೆನಾದರೂ ಆದರೆ ಧೋನಿ ನಾಯಕನಾಗಿ ಮುಂದುವರೆಯಲ್ಲಿದ್ದಾರೆ.
ಆದರೆ ನಾನು ಧೋನಿಯನ್ನು ನಾಯಕನಾಗಿ ಮಾತ್ರ ನೋಡಲು ಬಯಸುತ್ತೇನೆ. ಧೋನಿ ಕೇವಲ 10 ಪ್ರತಿಶತದಷ್ಟು ಫಿಟ್ ಆಗಿದ್ದರೂ, ಅವರು ಎಲ್ಲಾ ಪಂದ್ಯಗಳನ್ನು ಆಡಬಹುದು. ಅವರು ಮೊಣಕಾಲಿನ ಗಾಯದ ಹೊರತಾಗಿಯೂ ಕಳೆದ ಸೀಸನ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರು ಇಡೀ ಸೀಸನ್ ಆಡಿಬೇಕು ಎಂದು ರಾಯುಡು ಅಭಿಪ್ರಾಯಪಟ್ಟಿದ್ದಾರೆ.
Published On - 9:44 pm, Sat, 16 March 24