RCB ಫೈನಲ್ ಸೋಲಿನ ಕಹಿ ನೆನಪು ಕಾಡ್ತಿರುತ್ತದೆ: ಕೆಎಲ್ ರಾಹುಲ್
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಆರ್ಸಿಬಿ ತಂಡವು ಮೂರು ಬಾರಿ ಫೈನಲ್ಗೆ ಪ್ರವೇಶಿಸಿದೆ. 2009 ರಲ್ಲಿ ಚೊಚ್ಚಲ ಬಾರಿ ಫೈನಲ್ಗೆ ಎಂಟ್ರಿ ಕೊಟ್ಟಿದ್ದ ಆರ್ಸಿಬಿ ಇದಾದ ಬಳಿಕ 2011 ರಲ್ಲಿ ಅಂತಿಮ ಸುತ್ತಿಗೆ ಪ್ರವೇಶಿಸಿತ್ತು. ಆ ಬಳಿಕ 2016 ರಲ್ಲಿ ವಿರಾಟ್ ಕೊಹ್ಲಿಯ ನೇತೃತ್ವದಲ್ಲಿ ಆರ್ಸಿಬಿ ಫೈನಲ್ ಆಡಿತ್ತು. ಇದಾಗ್ಯೂ ಆರ್ಸಿಬಿಗೆ ಒಮ್ಮೆಯೂ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಳ್ಳಲು ಸಾಧ್ಯವಾಗಿಲ್ಲ.
1 / 7
ಅದು 2016... ಐಪಿಎಲ್ನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ SRH ತಂಡದ ನಾಯಕ ಡೇವಿಡ್ ವಾರ್ನರ್ ಬ್ಯಾಟಿಂಗ್ ಆಯ್ದುಕೊಂಡರು.
2 / 7
ಅದರಂತೆ ಇನಿಂಗ್ಸ್ ಆರಂಭಿಸಿದ ಸನ್ರೈಸರ್ಸ್ ಹೈದರಾಬಾದ್ ತಂಡವು 16.2 ಓವರ್ಗಳಲ್ಲಿ 150 ರನ್ ಕಲೆಹಾಕಿತು. ಈ ಹಂತದಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ಆರ್ಸಿಬಿ ರನ್ ಗತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಪರಿಣಾಮ 19 ಓವರ್ಗಳ ಮುಕ್ತಾಯದ ವೇಳೆ ಎಸ್ಆರ್ಹೆಚ್ ತಂಡದ ಸ್ಕೋರ್ 184 ರನ್ಗಳು.
3 / 7
ಆದರೆ ಕೊನೆಯ ಓವರ್ನಲ್ಲಿ ಬೆನ್ ಕಟ್ಟಿಂಗ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು. ಶೇನ್ ವಾಟ್ಸನ್ ಎಸೆದ ಅಂತಿಮ ಓವರ್ನಲ್ಲಿ 4, 6, 6, 1, 1, 6 ಸಿಡಿಸುವ ಮೂಲಕ ಕಟ್ಟಿಂಗ್ ಬರೋಬ್ಬರಿ 24 ರನ್ ಕಲೆಹಾಕಿದರು. ಈ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿತು.
4 / 7
209 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ತಂಡವು 10.3 ಓವರ್ಗಳಲ್ಲಿ 114 ರನ್ ಕಲೆಹಾಕಿತು. ಈ ಹಂತದಲ್ಲಿ ಕ್ರಿಸ್ ಗೇಲ್ (76) ಔಟಾದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ (54) ಕೂಡ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಎಬಿ ಡಿವಿಲಿಯರ್ಸ್ (5) ಹಾಗೂ ಕೆಎಲ್ ರಾಹುಲ್ (11) ಬಂದ ವೇಗದಲ್ಲೇ ಪೆವಿಲಿಯನ್ಗೆ ಹಿಂತಿರುಗಿದರು.
5 / 7
ಇದಾಗ್ಯೂ 15.3 ಓವರ್ಗಳಲ್ಲಿ ಆರ್ಸಿಬಿ 160 ರನ್ ಗಳಿಸಿತ್ತು. ಹೀಗಾಗಿ ಆರ್ಸಿಬಿಗೆ ಗೆಲ್ಲಲು ಉತ್ತಮ ಅವಕಾಶವಿತ್ತು. ಆದರೆ ಬೌಲಿಂಗ್ನಲ್ಲಿ ದುಬಾರಿಯಾಗಿದ್ದ ಶೇನ್ ವಾಟ್ಸನ್ ಬ್ಯಾಟಿಂಗ್ನಲ್ಲೂ ವಿಫಲರಾದರು. ಕೇವಲ 11 ರನ್ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಹೊರ ನಡೆದರು. ಅಂತಿಮವಾಗಿ ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 200 ರನ್ಗಳಿಸಿ ಸೋಲೊಪ್ಪಿಕೊಂಡಿತು.
6 / 7
ಈ ಮೂಲಕ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಅವಕಾಶವನ್ನು ಆರ್ಸಿಬಿ ಕೇವಲ 8 ರನ್ಗಳಿಂದ ಕೈಚೆಲ್ಲಿಕೊಂಡಿತು. ಈ ಫೈನಲ್ ಸೋಲು ಯಾವಾಗಲೂ ಕಾಡುತ್ತಿರುತ್ತದೆ ಎಂದಿದ್ದಾರೆ ಆರ್ಸಿಬಿ ತಂಡದ ಮಾಜಿ ಆಟಗಾರ ಕೆಎಲ್ ರಾಹುಲ್.
7 / 7
ಖಾಸಗಿ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ ರಾಹುಲ್, 2016ರ ಫೈನಲ್ ಪಂದ್ಯದ ನೆನಪು ಇನ್ನೂ ತಾಜಾವಾಗಿದೆ. ನಾನು ಮತ್ತು ವಿರಾಟ್ ಕೊಹ್ಲಿ ಹಲವು ಬಾರಿ ಈ ಸೋಲಿನ ಬಗ್ಗೆ ಚರ್ಚಿಸಿದ್ದೇವೆ. ಅಂದು ನಮ್ಮಲ್ಲಿ ಒಬ್ಬರು ಕ್ರೀಸ್ ಕಚ್ಚಿ ಆಡಿದ್ದರೆ ಫಲಿತಾಂಶ ಭಿನ್ನವಾಗಿರುತ್ತಿತ್ತು. ಒಂದು ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾವು ಅಂದು ಕಪ್ ಗೆದ್ದಿದ್ದರೆ ಅದು ತುಂಬಾ ವಿಶೇಷವಾಗಿರುತ್ತಿತ್ತು. ದುರಾದೃಷ್ಟ ಅದು ಸಾಧ್ಯವಾಗಲಿಲ್ಲ ಎಂದು ಕೆಎಲ್ ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ.