- Kannada News Photo gallery Cricket photos IPL 2025: Suryakumar Yadav has been offered captaincy by KKR
IPL 2025: ಸೂರ್ಯಕುಮಾರ್ ಯಾದವ್ಗೆ ಬಿಗ್ ಆಫರ್ ನೀಡಿದ KKR
Suryakumar Yadav: ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ಪರ 9 ಸೀಸನ್ಗಳನ್ನು ಆಡಿದ್ದರು. ಇದಾಗ್ಯೂ ಅವರು ಪಡೆಯುತ್ತಿರುವ ಸಂಭಾವನೆ ಮೊತ್ತ ಕೇವಲ 8 ಕೋಟಿ ರೂ. ಮಾತ್ರ. ಅದೇ ಇಶಾನ್ ಕಿಶನ್ ಸೇರಿದಂತೆ ಕೆಲ ಯುವ ಆಟಗಾರರು 10 ರಿಂದ 15 ಕೋಟಿ ರೂ. ಪಡೆಯುತ್ತಿದ್ದಾರೆ. ಇತ್ತ ಈ ಬಾರಿ ಮುಂಬೈ ಇಂಡಿಯನ್ಸ್ ಸೂರ್ಯಕುಮಾರ್ ಯಾದವ್ ಅವರನ್ನು ಉಳಿಸಿಕೊಂಡರೆ ಗರಿಷ್ಠ 12 ಕೋಟಿ ರೂ. ಪಡೆಯಬಹುದಷ್ಟೇ. ಈ ಎಲ್ಲಾ ಕಾರಣಗಳಿಂದ ಸೂರ್ಯ ಕೆಕೆಆರ್ ಆಫರ್ ಅನ್ನು ಒಪ್ಪಲಿದ್ದಾರಾ ಕಾದು ನೋಡಬೇಕಿದೆ.
Updated on: Aug 25, 2024 | 8:22 AM

IPL 2025: ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಫ್ರಾಂಚೈಸಿಗಳು ಸ್ಟಾರ್ ಆಟಗಾರರನ್ನು ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿದೆ. ಒಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ರೋಹಿತ್ ಶರ್ಮಾಗಾಗಿ ಪ್ಲ್ಯಾನ್ ರೂಪಿಸುತ್ತಿದ್ದರೆ, ಮತ್ತೊಂದೆಡೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ತೆರೆಮರೆಯಲ್ಲೇ ಸೂರ್ಯಕುಮಾರ್ ಯಾದವ್ ಅವರಿಗೆ ಬಿಗ್ ಆಫರ್ ನೀಡಿದೆ.

ಸೂರ್ಯಕುಮಾರ್ ಯಾದವ್ ಅವರೊಂದಿಗೆ ಕೆಕೆಆರ್ ಫ್ರಾಂಚೈಸಿ ಮಾತುಕತೆ ನಡೆಸಿದ್ದು, ಈ ವೇಳೆ ಬೃಹತ್ ಮೊತ್ತದ ಆಫರ್ ನೀಡಲಾಗಿದೆ. ಅಷ್ಟೇ ಅಲ್ಲದೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಗಮಿಸಿದರೆ ನಾಯಕತ್ವವನ್ನು ಸಹ ನೀಡುವುದಾಗಿ ತಿಳಿಸಿದೆ. ಈ ಮೂಲಕ ಸೂರ್ಯಕುಮಾರ್ ಯಾದವ್ ಅವರ ಖರೀದಿಗೆ ಕೆಕೆಆರ್ ಪ್ಲ್ಯಾನ್ ರೂಪಿಸುತ್ತಿದೆ.

ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿರುವ ಸೂರ್ಯಕುಮಾರ್ ಯಾದವ್ ಪಡೆಯುತ್ತಿರುವುದು ಕೇವಲ 8 ಕೋಟಿ ರೂ. ಮಾತ್ರ. ಆದರೆ ಕೆಕೆಆರ್ ತಂಡಕ್ಕೆ ಬಂದರೆ ನಾಯಕನಾಗಿ ಆಯ್ಕೆ ಮಾಡುವುದರೊಂದಿಗೆ ಬೃಹತ್ ಮೊತ್ತವನ್ನು ನೀಡುವುದಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ತಿಳಿಸಿದೆ ಎಂದು ವರದಿಯಾಗಿದೆ.

ಹೀಗಾಗಿ ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ರೋಹಿತ್ ಶರ್ಮಾ ಬಳಿಕ ಸೂರ್ಯ ಮುಂಬೈ ಇಂಡಿಯನ್ಸ್ ತಂಡದ ಚುಕ್ಕಾಣಿ ಹಿಡಿಯುವ ವಿಶ್ವಾಸದಲ್ಲಿದ್ದರು.

ಆದರೆ ಅನಿರೀಕ್ಷಿತ ಎಂಬಂತೆ ಗುಜರಾತ್ ಟೈಟಾನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯರನ್ನು ಕರೆತರುವ ಮೂಲಕ ಮುಂಬೈ ಇಂಡಿಯನ್ಸ್ ನಾಯಕತ್ವ ನೀಡಿತ್ತು. ಇದೀಗ ಸೂರ್ಯಕುಮಾರ್ ಯಾದವ್ ಮುಂದೆ ಕೂಡ ಇದೇ ಮಾದರಿಯ ಆಫರ್ ಇದೆ. ಮುಂಬೈ ಇಂಡಿಯನ್ಸ್ ತೊರೆದು ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ, ನಾವು ಖರೀದಿಸುತ್ತೇವೆ, ಅಲ್ಲದೆ ಕ್ಯಾಪ್ಟನ್ ಪಟ್ಟವನ್ನು ನೀಡುತ್ತೇವೆ ಎಂದು ಕೆಕೆಆರ್ ತಿಳಿಸಿದೆ.

ಅಂದಹಾಗೆ ಸೂರ್ಯಕುಮಾರ್ ಯಾದವ್ 2014 ರಿಂದ 2017ರವರೆಗೆ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು. ಹೀಗಾಗಿ ಕೆಕೆಆರ್ ಫ್ರಾಂಚೈಸಿ ಸೂರ್ಯನ ಪಾಲಿಗೆ ಹೊಸದೇನಲ್ಲ. ಅದರಲ್ಲೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕ ಶಾರುಖ್ ಖಾನ್ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಸೂರ್ಯಕುಮಾರ್ ಯಾದವ್ ಕೆಕೆಆರ್ ಆಫರ್ ಅನ್ನು ಒಪ್ಪಿ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
