- Kannada News Photo gallery Cricket photos Ipl 2025 kl rahul likely to join rcb cricket news in kannada zp
IPL 2025: RCB ತಂಡಕ್ಕೆ ಕೆಎಲ್ ರಾಹುಲ್ ರಿಎಂಟ್ರಿ?
IPL 2025: ಕೆಎಲ್ ರಾಹುಲ್ ಐಪಿಎಲ್ನಲ್ಲಿ ಆರ್ಸಿಬಿ ಪರ ಒಟ್ಟು 19 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 14 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು 4 ಅರ್ಧಶತಕಗಳೊಂದಿಗೆ ಒಟ್ಟು 417 ರನ್ ಕಲೆಹಾಕಿದ್ದಾರೆ. ಇದಾದ ಬಳಿಕ ಸನ್ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಪರ ಆಡಿದ್ದ ರಾಹುಲ್ ಈಗ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದಾರೆ. ಆದರೆ ಮುಂಬರುವ ಮೆಗಾ ಹರಾಜಿಗೂ ಮುನ್ನ ಅವರು ಎಲ್ಎಸ್ಜಿ ತಂಡದಿಂದ ಹೊರಬರಲಿದ್ದಾರೆ ಎಂಬ ಸುದ್ದಿ ಮಹತ್ವ ಪಡೆದುಕೊಂಡಿದೆ.
Updated on: Jul 21, 2024 | 10:54 AM

ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಐಪಿಎಲ್ (IPL 2025) ಸೀಸನ್ 18 ರ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಲಕ್ನೋ ತಂಡದಿಂದ ರಾಹುಲ್ ಹೊರಬರುವುದು ಬಹುತೇಕ ಖಚಿತವಾಗಿದ್ದು, ಅದರಂತೆ ಅವರು ಮುಂದಿನ ಆಕ್ಷನ್ಗೆ ಹೆಸರು ನೀಡಲಿದ್ದಾರೆ ಎಂದು ದೈನಿಕ್ ಜಾಗರಣ್ ವರದಿ ಮಾಡಿದೆ.

ಈ ನಿರ್ಧಾರಕ್ಕೆ ಮುಖ್ಯ ಕಾರಣ, ಕಳೆದ ಬಾರಿಯ ಐಪಿಎಲ್ ಪಂದ್ಯದ ವೇಳೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕರಾದ ಸಂಜಯ್ ಗೊಯೆಂಕಾ ಮೈದಾನದಲ್ಲೇ ಕೆಎಲ್ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ರಾಹುಲ್ ಎಲ್ಎಸ್ಜಿ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡಲಾರಂಭಿಸಿದ್ದವು.

ಇದೀಗ ಈ ಸುದ್ದಿಯು ಮತ್ತೆ ಮುನ್ನಲೆಗೆ ಬಂದಿದ್ದು, ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗುಡ್ ಬೈ ಹೇಳುವುದು ಖಚಿತ ಎನ್ನಲಾಗುತ್ತಿದೆ. ಇದರ ಜೊತೆಗೆ ಕೆಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಯ್ಕೆಯಾಗಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.

ಕೆಎಲ್ ರಾಹುಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದು, ಈ ವೇಳೆ ಅವರನ್ನು ಖರೀದಿಸಲು ಆರ್ಸಿಬಿ ಆಸಕ್ತಿ ಹೊಂದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಹೇಳಲಾಗಿದೆ. ಹೀಗಾಗಿ ಮೆಗಾ ಹರಾಜಿನಲ್ಲಿ ಕೆಎಲ್ಆರ್ ಕಾಣಿಸಿಕೊಂಡರೆ, ಆರ್ಸಿಬಿ ಪಾಲಾಗುವುದು ಖಚಿತ ಎನ್ನಲಾಗುತ್ತಿದೆ.

ಏಕೆಂದರೆ ಕೆಎಲ್ ರಾಹುಲ್ ಈ ಹಿಂದೆ ಆರ್ಸಿಬಿ ಪರ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೆ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಅವರ ಸ್ಥಾನ ತುಂಬಬಲ್ಲ ಆಟಗಾರನ ಅವಶ್ಯಕತೆ ಆರ್ಸಿಬಿಗೆ ಇದೆ. ಹೀಗಾಗಿ ಆರ್ಸಿಬಿ ಫ್ರಾಂಚೈಸಿಯು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.

ಮತ್ತೊಂದೆಡೆ ಆರ್ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ಗೆ ಈಗ 39 ವರ್ಷ. ಅಂದರೆ ಮುಂದಿನ ಸೀಸನ್ ವೇಳೆ ಅವರಿಗೆ 40 ವರ್ಷ ಆಗಿರಲಿದೆ. ಭವಿಷ್ಯದ ದೃಷ್ಟಿಯಿಂದ ಆರ್ಸಿಬಿ ಈಗಲೇ ಹೊಸ ನಾಯಕನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆಯಿದೆ. ಇತ್ತ ಕೆಎಲ್ ರಾಹುಲ್ ಆಯ್ಕೆಯಿಂದ ಆರ್ಸಿಬಿ ಈ ಎರಡು ಸ್ಥಾನಗಳನ್ನು ತುಂಬಬಹುದು. ಅಂದರೆ ನಾಯಕನಾಗಿ ಎರಡು ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಪ್ಲೇಆಫ್ಗೆ ಕೊಂಡೊಯ್ದಿರುವ ಕೆಎಲ್ ರಾಹುಲ್ ಈಗಾಗಲೇ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಇದರ ಜೊತೆಗೆ ವಿಕೆಟ್ ಕೀಪರ್ ಆಗಿಯೂ ಐಪಿಎಲ್ನಲ್ಲಿ ಮಿಂಚಿದ್ದಾರೆ.

ಹೀಗಾಗಿ ಕೆಎಲ್ ರಾಹುಲ್ ಆಯ್ಕೆಯಿಂದ ಆರ್ಸಿಬಿ ವಿಕೆಟ್ ಕೀಪರ್ ಹಾಗೂ ನಾಯಕನ ಸ್ಥಾನವನ್ನು ತುಂಬಿಕೊಳ್ಳಬಹುದು. ಅದರಂತೆ ಐಪಿಎಲ್ 2025 ರಲ್ಲಿ ಕೆಎಲ್ಆರ್ ಆರ್ಸಿಬಿಗೆ ಬಂದರೆ ಕ್ಯಾಪ್ಟನ್ ಪಟ್ಟದೊಂದಿಗೆ ಕಣಕ್ಕಿಳಿಯುವುದು ಖಚಿತ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಕೆಎಲ್ ರಾಹುಲ್ (KL Rahul) ಹೊಸ ಅಧ್ಯಾಯ ಶುರು ಮಾಡಲಿದ್ದಾರಾ ಕಾದು ನೋಡಬೇಕಿದೆ.




