IPL 2025: ಪ್ಲೇಆಫ್ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ ಸೆಹ್ವಾಗ್
IPL 2025: ಐಪಿಎಲ್ನ 18ನೇ ಆವೃತ್ತಿಗೆ ಕ್ಷಣಗಣನೆ ಶುರುವಾಗಿದೆ. 10 ತಂಡಗಳ ನಡುವಣ ಈ ಕ್ರಿಕೆಟ್ ಕದನಕ್ಕೆ ಇಂದು (ಮಾ.22) ರಾತ್ರಿ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಚಾಲನೆ ಸಿಗಲಿದೆ. ವಿಶೇಷ ಎಂದರೆ ಈ ಬಾರಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಣಕ್ಕಿಳಿಯಲಿದೆ.
Updated on: Mar 22, 2025 | 12:09 PM

ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ಕ್ಕೆ ಇಂದು ಚಾಲನೆ ದೊರೆಯಲಿದೆ. ಕೊಲ್ಕತ್ತಾದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಲಿದೆ. ಇದಕ್ಕೂ ಮುನ್ನವೇ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಈ ಬಾರಿಯ ಐಪಿಎಲ್ನಲ್ಲಿ ಪ್ಲೇಆಫ್ ಪ್ರವೇಶಿಸುವ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ. ಆ ತಂಡಗಳೆಂದರೆ...

ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ ಮುಂದಾಳತ್ವದ ಮುಂಬೈ ಇಂಡಿಯನ್ಸ್ ತಂಡವು ಈ ಬಾರಿ ಮತ್ತಷ್ಟು ಬಲಿಷ್ಠವಾಗಿದೆ. ಹೀಗಾಗಿ ಮುಂಬೈ ತಂಡದಿಂದ ಈ ಸಲ ಉತ್ತಮ ಪ್ರದರ್ಶನ ನಿರೀಕ್ಷಿಸಬಹುದು. ಅಲ್ಲದೆ ಅವರು ಪ್ಲೇಆಫ್ ಹಂತಕ್ಕೇರುವುದು ಖಚಿತ ಎಂದಿದ್ದಾರೆ ಸೆಹ್ವಾಗ್.

ಸನ್ರೈಸರ್ಸ್ ಹೈದರಾಬಾದ್: ಕಳೆದ ಬಾರಿ ಫೈನಲ್ಗೇರಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲೂ ಅಂತಹ ಬದಲಾವಣೆ ಕಂಡು ಬಂದಿಲ್ಲ. ಅದರಲ್ಲೂ ಅವರ ಬ್ಯಾಟಿಂಗ್ ಲೈನಪ್ ಬಲಿಷ್ಠವಾಗಿರುವುದರಿಂದ ಈ ಸಲ ಕೂಡ ಎಸ್ಆರ್ಹೆಚ್ ಟಾಪ್-4 ಹಂತ್ಕೇರಲಿದೆ ಎಂದು ವೀರು ಭವಿಷ್ಯ ನುಡಿದಿದ್ದಾರೆ.

ಪಂಜಾಬ್ ಕಿಂಗ್ಸ್: ಈ ಬಾರಿ ಪಂಜಾಬ್ ಕಿಂಗ್ಸ್ ಸಮತೋಲಿತ ಕಂಡುವನ್ನು ರೂಪಿಸಿದ್ದಾರೆ. ಶ್ರೇಯಸ್ ಅಯ್ಯರ್ ಮುಂದಾಳತ್ವದಲ್ಲಿ ಕಣಕ್ಕಿಳಿಯಲಿರುವ ಪಂಜಾಬ್ ಕಿಂಗ್ಸ್ ತಂಡದಲ್ಲಿ ಅತ್ಯುತ್ತಮ ಆಟಗಾರರಿದ್ದು, ಹೀಗಾಗಿ ಈ ಪಂಜಾಬ್ ಕೂಡ ಪ್ಲೇಆಫ್ ಹಂತಕ್ಕೇರುವುದನ್ನು ಎದುರು ನೋಡಬಹುದು ಎಂದಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್: ಎಲ್ಎಸ್ಜಿ ಫ್ರಾಂಚೈಸಿ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ತಂಡಕ್ಕೆ ನಾಯಕನಾಗಿ ರಿಷಭ್ ಪಂತ್ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ ತಂಡದಲ್ಲಿ ಉತ್ತಮ ಆಟಗಾರರ ದಂಡೇ ಇದೆ. ಹಾಗಾಗಿ ಲಕ್ನೋ ಸೂಪರ್ ಜೈಂಟ್ಸ್ ಕೂಡ ಪ್ಲೇಆಫ್ ಆಡಲಿದೆ ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಇದಾಗ್ಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ಹಂತಕ್ಕೇರುವುದು ಡೌಟ್ ಎಂದಿದ್ದಾರೆ. ಸೆಹ್ವಾಗ್ ಭವಿಷ್ಯದಂತೆ ಈ ಬಾರಿಯ ಐಪಿಎಲ್ನ ಲೀಗ್ ಹಂತದ ಪಂದ್ಯಗಳ ಮುಕ್ತಾಯದ ವೇಳೆಗೆ ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಲಕ್ನೋ ಸೂಪರ್ ಜೈಂಟ್ಸ್, ಸನ್ರೈಸರ್ಸ್ ಹೈದರಾಬಾದ್ ತಂಡಗಳು ಟಾಪ್-4 ಹಂತದಲ್ಲಿ ಕಾಣಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.



















