
2026 ರ ಐಪಿಎಲ್ ಆರಂಭಕ್ಕೂ ಮುನ್ನ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಘಾತ ಎದುರಾಗಿದೆ. ತಂಡಕ್ಕೆ ಪ್ರಮುಖ ವೇಗದ ಬೌಲರ್ ಹರ್ಷಿತ್ ರಾಣಾ ಅವರನ್ನು 19 ನೇ ಸೀಸನ್ ಐಪಿಎಲ್ನಿಂದ ಹೊರಗಿಡಲಾಗಿದೆ. ಇಂಜುರಿಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ರಾಣಾರನ್ನು ಐಪಿಎಲ್ನಿಂದ ಹೊರಗಿಡುವ ತೀರ್ಮಾನಕ್ಕೆ ಬರಲಾಗಿದೆ.

ವಾಸ್ತವವಾಗಿ 2026 ರ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯಗಳ ಸಮಯದಲ್ಲಿ ಹರ್ಷಿತ್ ರಾಣಾ ಗಾಯಗೊಂಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ರಾಣಾಗೆ ಗಾಯವಾಗಿತ್ತು. ಈ ಗಾಯದಿಂದಾಗಿ ಅವರು ಟಿ20 ವಿಶ್ವಕಪ್‌ನಿಂದ ಹೊರಗುಳಿಯಬೇಕಾಯಿತು. ಇದರ ನಂತರ ಹರ್ಷಿತ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದ್ದ ಹರ್ಷಿತ್ ರಾಣಾ, ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ, ಇದರಿಂದಾಗಿ ಅವರು ಐಪಿಎಲ್ 2026 ರಿಂದ ಹಿಂದೆ ಸರಿಯಬೇಕಾಯಿತು. ಆದರೆ ಐಪಿಎಲ್ನಿಂದ ಹೊರಬಿದ್ದ ಬಳಿಕವೂ ಹರ್ಷಿತ್ ರಾಣಾಗೆ 4 ಕೋಟಿ ರೂ. ವೇತನ ಪಡೆಯಲಿದ್ದಾರೆ. ಆದಾಗ್ಯೂ ಈ ವೇತನವನ್ನು ಕೆಕೆಆರ್ ಫ್ರಾಂಚೈಸಿ ನೀಡುವುದಿಲ್ಲ. ಬದಲಿಗೆ ಬಿಸಿಸಿಐ ನೀಡಲಿದೆ.

ಬಿಸಿಸಿಐ ನಿಯಮಗಳ ಪ್ರಕಾರ, ಕೇಂದ್ರೀಯ ಒಪ್ಪಂದಕ್ಕೆ ಒಳಪಟ್ಟಿರುವ ಆಟಗಾರ ಗಾಯಗೊಂಡು ಇಡೀ ಆವೃತ್ತಿಯಿಂದ ಹೊರಗುಳಿದ್ದರೂ ಆತನಿಗೆ ಪೂರ್ಣ ಸಂಬಳವನ್ನು ನೀಡಲಾಗುತ್ತದೆ. 2011 ರಿಂದ ಜಾರಿಗೆ ಬಂದ ಬಿಸಿಸಿಐ ನ ಈ ನೀತಿಯು ಈಗಲೂ ಜಾರಿಯಲ್ಲಿದೆ. ಹರ್ಷಿತ್ ರಾಣಾ ಅವರಿಗಿಂತ ಮೊದಲು, ರಿಷಭ್ ಪಂತ್ ಮತ್ತು ದೀಪಕ್ ಚಾಹರ್ ಈಗಾಗಲೇ ಈ ನೀತಿಯಿಂದ ಪ್ರಯೋಜನ ಪಡೆದಿದ್ದಾರೆ.

ಹರ್ಷಿತ್ ರಾಣಾ ಐಪಿಎಲ್ನಿಂದ ಹೊರಬಿದ್ದ ಬೆನ್ನಲ್ಲೇ ಕೆಕೆಆರ್ ತಂಡಕ್ಕೆ ಜಿಂಬಾಬ್ವೆ ತಂಡದ ಸ್ಟಾರ್ ವೇಗಿ ಬ್ಲೆಸಿಂಗ್ ಮುಜರಬಾನಿಯ ಆಗಮನವಾಗಿದೆ. ಕೆಕೆಆರ್ ಮುಸ್ತಾಫಿಜುರ್ ರೆಹಮಾನ್ ಅವರ ಬದಲಿಯಾಗಿ ಬ್ಲೆಸಿಂಗ್ ಮುಜರಬಾನಿಯನ್ನು ತಂಡಕ್ಕೆ ಆಯ್ಕೆ ಮಾಡಿದೆ. ಈಗ, ಹರ್ಷಿತ್ ರಾಣಾ ಅವರ ಬದಲಿ ಆಟಗಾರನನ್ನು ಹುಡುಕುವ ಸವಾಲು ಕೆಕೆಆರ್ ಮುಂದಿದೆ. ಹರ್ಷಿತ್ ರಾಣಾ ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಪ್ರಮುಖ ವೇಗದ ಬೌಲರ್ ಆಗಿದ್ದು, ಇಲ್ಲಿಯವರೆಗೆ ಈ ತಂಡದ ಪರ 34 ಪಂದ್ಯಗಳಲ್ಲಿ 40 ವಿಕೆಟ್‌ಗಳನ್ನು ಕಬಳಿಸಿದ್ದಾರೆ.