IPL 2026: ಇದೆಂತಹ ಫ್ರಾಂಚೈಸಿ… ಸಾಮಾಜಿಕ ಬದ್ಧತೆಯನ್ನೇ ಮರೆತ RCB
IPL 2026 RCB: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಮಿನಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 17 ಆಟಗಾರರನ್ನು ರಿಟೈನ್ ಮಾಡಿಕೊಂಡು 8 ಆಟಗಾರರನ್ನು ಬಿಡುಗಡೆ ಮಾಡಿದೆ. ಹೀಗೆ ರಿಟೈನ್ ಮಾಡಲಾದ ಆಟಗಾರರ ಪಟ್ಟಿಯಲ್ಲಿ ಅತ್ಯಾಚಾರದ ಆರೋಪಿ ಕೂಡ ಕಾಣಿಸಿಕೊಂಡಿರುವುದು ಅಚ್ಚರಿ.
Updated on:Nov 16, 2025 | 10:23 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬೆಂಗಳೂರು ತಂಡ 17 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಈ ಹದಿನೇಳು ಆಟಗಾರರಲ್ಲಿ ಅತ್ಯಾಚಾರ ಹಾಗೂ ಲೈಂಗಿನ ದೌರ್ಜನ್ಯ ಎಸೆಗಿದ ಆರೋಪಕ್ಕೀಡಾಗಿರುವ ಆಟಗಾರ ಕೂಡ ಇರುವುದು ಅಚ್ಚರಿ.

ಮೊದಲೇ ಅಭಿಮಾನಿಗಳ ಸಾವಿಗೆ ಕಾರಣರಾದ ಫ್ರಾಂಚೈಸಿ ಎಂಬ ಹಣೆಪಟ್ಟಿ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಅತ್ಯಾಚಾರಿ ಆರೋಪಿಯನ್ನು ತಂಡದಲ್ಲೇ ಉಳಿಸಿಕೊಂಡು ಅಚ್ಚರಿ ಮೂಡಿಸಿದೆ. ಅದು ಕೂಡ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಬ್ಯಾನ್ ಮಾಡಿರುವ ಆಟಗಾರರನನ್ನು ಎಂಬುದು ಇಲ್ಲಿ ಉಲ್ಲೇಖಾರ್ಹ.

ಹೌದು, ಆರ್ಸಿಬಿ ತಂಡದ ಎಡಗೈ ವೇಗಿ ಯಶ್ ದಯಾಳ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪವಿದೆ. ಈ ಸಂಬಂಧ ಉತ್ತರ ಪ್ರದೇಶದ ಗಾಝಿಯಾಬಾದ್ ಠಾಣೆಯಲ್ಲಿ ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಯಶ್ ದಯಾಳ್ ಅವರು ಮದುವೆಯ ಆಮಿಷವೊಡ್ಡಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಅಲ್ಲದೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಯುವತಿಯೊಬ್ಬಳು ದೂರು ನೀಡಿದ್ದಾರೆ.

ಇದರ ಜೊತೆಗೆ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸೆಗಿದ ಆರೋಪ ಕೂಡ ಯಶ್ ದಯಾಳ್ ವಿರುದ್ಧ ಕೇಳಿ ಬಂದಿದೆ. ಹೀಗಾಗಿಯೇ ಯಶ್ ದಯಾಳ್ ಅವರನ್ನು ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಯುಪಿಸಿಎ) ಯುಪಿ ಟಿ20 ಲೀಗ್ನಿಂದ ಹೊರಗಿಟ್ಟಿದ್ದರು. ಅಷ್ಟೇ ಅಲ್ಲದೆ ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯಲ್ಲೂ ಅವರಿಗೆ ಅವಕಾಶ ನೀಡಿರಲಿಲ್ಲ.

ಆದರೆ ಒಂದು ಪ್ರದೇಶ ಅಥವಾ ಒಂದು ರಾಜ್ಯದ ಜನರನ್ನು ಪ್ರತಿನಿಧಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಾತ್ರ ಯಶ್ ದಯಾಳ್ ಅವರನ್ನು ತಂಡದಲ್ಲೇ ಉಳಿಸಿಕೊಂಡಿದೆ. ಇದರ ಬೆನ್ನಲ್ಲೇ ಆರ್ಸಿಬಿ ಫ್ರಾಂಚೈಸಿಗೆ ಸಾಮಾಜಿಕ ಬದ್ಧತೆಯೇ ಇಲ್ವಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಯಶ್ ದಯಾಳ್ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದ ಬೆನ್ನಲ್ಲೇ ಉತ್ತರ ಪ್ರದೇಶ್ ಕ್ರಿಕೆಟ್ ಬೋರ್ಡ್ ಅವರನ್ನು ಯುಪಿ ಟಿ20 ಲೀಗ್ನಿಂದ ಹೊರಗಿಟ್ಟಿದ್ದರು. ಅಲ್ಲದೆ ಆ ಬಳಿಕ ಅವರನ್ನು ರಾಜ್ಯ ತಂಡಕ್ಕೂ ಆಯ್ಕೆ ಮಾಡಿಲ್ಲ. ಅಂದರೆ ಆರೋಪ ಮುಕ್ತರಾಗುವವರೆಗೆ ಅವರಿಗೆ ಕಣಕ್ಕಿಳಿಯಲು ಅವಕಾಶ ನೀಡುವುದಿಲ್ಲ ಎಂಬ ಸ್ಪಷ್ಟ ನಿಲುವು ತೋರಿದ್ದಾರೆ.

ಇದಾಗ್ಯೂ ಬೆಂಗಳೂರನ್ನು ಪ್ರತಿನಿಧಿಸುವ ಆರ್ಸಿಬಿ ಫ್ರಾಂಚೈಸಿಗೆ ಉತ್ತರ ಪ್ರದೇಶದ ಆಟಗಾರ ಯಶ್ ದಯಾಳ್ ಅತೀ ಮುಖ್ಯರಾಗಿ ಬಿಟ್ಟಿದ್ದಾರೆ. ಹೀಗಾಗಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಪ್ರಶ್ನೆಗಳೆದಿದ್ದು, ಅನೇಕರು ಸೋಷಿಯಲ್ ಮೀಡಿಯಾ ಮೂಲಕ ಆರ್ಸಿಬಿ ನಿಲುವನ್ನು ಪ್ರಶ್ನಿಸಿದ್ದಾರೆ.
Published On - 10:10 am, Sun, 16 November 25
