IPL Auction 2025: ಕಡಿಮೆ ಮೊತ್ತಕ್ಕೆ ಆರು ಆಟಗಾರರನ್ನು ಖರೀದಿಸಿದ ಆರ್ಸಿಬಿ
RCB IPL Auction 2025: ಐಪಿಎಲ್ ಮೆಗಾ ಹರಾಜಿನ ಮೊದಲ ದಿನ ಆರ್ಸಿಬಿ ಒಟ್ಟು 6 ಆಟಗಾರರನ್ನು ಖರೀದಿಸಿತು. ಇದರಲ್ಲಿ ಮೂವರು ಆಟಗಾರರು ವಿದೇಶಿಗರಾದರೆ... ಉಳಿದ ಮೂವರು ಭಾರತೀಯ ಆಟಗಾರರಾಗಿದ್ದಾರೆ. ಬೇರೆ ತಂಡಗಳಿಗೆ ಹೊಲಿಸಿದರೆ, ಆರ್ಸಿಬಿ ಯಾವುದೇ ಆಟಗಾರನಿಗೂ ದುಬಾರಿ ಬೆಲೆ ನೀಡಲಿಲ್ಲ.
Updated on: Nov 24, 2024 | 11:25 PM

ಐಪಿಎಲ್ ಮೆಗಾ ಹರಾಜಿನ ಮೊದಲ ದಿನ ಆರ್ಸಿಬಿ ಒಟ್ಟು 6 ಆಟಗಾರರನ್ನು ಖರೀದಿಸಿತು. ಇದರಲ್ಲಿ ಮೂವರು ಆಟಗಾರರು ವಿದೇಶಿಗರಾದರೆ... ಉಳಿದ ಮೂವರು ಭಾರತೀಯ ಆಟಗಾರರಾಗಿದ್ದಾರೆ. ಬೇರೆ ತಂಡಗಳಿಗೆ ಹೊಲಿಸಿದರೆ, ಆರ್ಸಿಬಿ ಯಾವುದೇ ಆಟಗಾರನಿಗೂ ದುಬಾರಿ ಬೆಲೆ ನೀಡಲಿಲ್ಲ.

ಆರ್ಸಿಬಿಯ ಮೊದಲ ಖರೀದಿಯಾಗಿ ಇಂಗ್ಲೆಂಡ್‌ನ ಸ್ಫೋಟಕ ಆಲ್‌ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್ ತಂಡವನ್ನು ಸೇರಿಕೊಂಡರು. ಅವರನ್ನು ಆರ್ಸಿಬಿ 8.75 ಕೋಟಿ ನೀಡಿ ಖರೀದಿ ಮಾಡಿದೆ.

ಎರಡನೇ ಆಯ್ಕೆಯಾಗಿ ಮತ್ತೊಬ್ಬ ಇಂಗ್ಲೆಂಡ್ ಪ್ಲೇಯರ್ ಅನ್ನು ಖರೀದಿಸಿದ ಆರ್ಸಿಬಿ, ಈ ಬಾರಿ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಿಲ್ ಸಾಲ್ಟ್ ಅವರನ್ನು 11.50 ಕೋಟಿ ನೀಡಿ ತನ್ನ ಖಾತೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಮೂರನೇ ಆಯ್ಕೆಯಾಗಿ ಭಾರತದ ವಿಕೆಟ್ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಅವರನ್ನು ಆರ್ಸಿಬಿ ಖರೀದಿಸಿತು. ಮೆಗಾ ಹರಾಜಿನಲ್ಲಿ ಜಿತೇಶ್ ಶರ್ಮಾ ಅವರನ್ನು ಖರೀದಿಸಲು ಲಕ್ನೋ, ಸಿಎಸ್ಕೆ, ಡೆಲ್ಲಿ ಕ್ಯಾಪಿಟಲ್ಸ್ ಸೇರಿದಂತೆ ಇತರ ಫ್ರಾಂಚೈಸಿಗಳು ಮುಗಿಬಿದ್ದಿದ್ದವು. ಆದರೆ ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಿತೇಶ್ ಶರ್ಮಾ ಅವರನ್ನು 11 ಕೋಟಿಗೆ ಖರೀದಿಸಿತು.

ನಾಲ್ಕನೇ ಆಟಗಾರನಾಗಿ ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಜೋಶ್ ಹೇಜಲ್‌ವುಡ್ ಮತ್ತೊಮ್ಮೆ ಆರ್ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. 2023 ರ ಆವೃತ್ತಿಯಲ್ಲಿ ಆರ್ಸಿಬಿ ಪರ ಆಡಿದ್ದ ಹೇಜಲ್‌ವುಡ್ 2 ಕೋಟಿ ಮೂಲ ಬೆಲೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಅಂತಿಮವಾಗಿ ಅವರನ್ನು ಆರ್ಸಿಬಿ 12.50 ಕೋಟಿಗೆ ಖರೀದಿಸಿದೆ.

ಐದನೇ ಆಯ್ಕೆಯಾಗಿ ಭಾರತದ ಬೌಲರ್ ಕಡೆ ಮುಖ ಮಾಡಿದ ಆರ್ಸಿಬಿ ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ರಾಸಿಕ್ ದರ್ ಅವರನ್ನು 6 ಕೋಟಿ ನೋಡಿ ಖರೀದಿಸಿತು. ಇದರೊಂದಿಗೆ ಆರ್ಸಿಬಿ ಪಾಳಯದ ವೇಗಿಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ದಿನದ ಕೊನೆಯ ಖರೀದಿಯಾಗಿ ಕಳೆದ ಬಾರಿ ಕೆಕೆಆರ್ ತಂಡದ ಪ್ರಮುಖ ಸ್ಪಿನ್ನರ್ಗಳಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದ ಭಾರತದ ಸ್ಪಿನ್ನರ್ ಸುಯೇಶ್ ಶರ್ಮಾ ಅವರನ್ನು ಆರ್ಸಿಬಿ 2.2 ಕೋಟಿ ರೂ. ನೀಡಿ ತನ್ನ ಬತ್ತಳಿಕೆಗೆ ಹಾಕಿಕೊಂಡಿದೆ.



















