- Kannada News Photo gallery Cricket photos Jasprit Bumrah's Historic ICC Ranking: No.1 Test Bowler with 907 Rating Points
ICC Rankings: ವರ್ಷದ ಮೊದಲ ದಿನವೇ ಇತಿಹಾಸ ಸೃಷ್ಟಿಸಿದ ಜಸ್ಪ್ರೀತ್ ಬುಮ್ರಾ
ICC Rankings: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಐಸಿಸಿ ಟೆಸ್ಟ್ ಬೌಲರ್ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದೀಗ 907 ರೇಟಿಂಗ್ ಪಾಯಿಂಟ್‌ಗಳನ್ನು ಕಲೆಹಾಕಿರುವ ಬುಮ್ರಾ ಭಾರತೀಯ ಟೆಸ್ಟ್ ಬೌಲರ್‌ಗಳ ಇತಿಹಾಸದಲ್ಲಿ ಹೆಚ್ಚು ರೇಟಿಂಗ್ ಪಾಯಿಂಟ್‌ಗಳನ್ನು ಪಡೆದ ಮೊದಲ ವೇಗಿ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.
Updated on: Jan 01, 2025 | 3:04 PM

ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಪ್ರಸ್ತುತ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಇದರ ಲಾಭ ಪಡೆದಿರುವ ಬುಮ್ರಾ ಐಸಿಸಿ ಟೆಸ್ಟ್ ಶ್ರೇಯಾಂಕದಲೂ ನಂಬರ್ 1 ಬೌಲರ್ ಎನಿಸಿಕೊಂಡಿದ್ದಾರೆ.

ಇದೀಗ ಐಸಿಸಿ 2025 ರ ಮೊದಲ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ಈ ಹಿಂದೆ ಯಾವುದೇ ಭಾರತೀಯ ಬೌಲರ್ ಮಾಡದ ಸಾಧನೆ ಮಾಡಿದ್ದಾರೆ.

ಮೆಲ್ಬೋರ್ನ್ ಟೆಸ್ಟ್‌ನಲ್ಲಿ 9 ವಿಕೆಟ್ ಪಡೆದಿದ್ದ ಜಸ್ಪ್ರಿತ್ ಬುಮ್ರಾ ಇದೀಗ ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ಬೌಲರ್‌ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ 907 ರೇಟಿಂಗ್ ಪಾಯಿಂಟ್‌ಗಳನ್ನು ಪಡೆದಿರುವ ಬುಮ್ರಾ ಇದರೊಂದಿಗೆ ಐಸಿಸಿ ಶ್ರೇಯಾಂಕದ ಇತಿಹಾಸದಲ್ಲಿ ಇಷ್ಟು ರೇಟಿಂಗ್ ಪಾಯಿಂಟ್ ಪಡೆದ ಭಾರತದ ಮೊದಲ ಟೆಸ್ಟ್ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಭಾರತದ ಯಾವುದೇ ಬೌಲರ್‌ಗಳು ಟೆಸ್ಟ್ ಶ್ರೇಯಾಂಕದಲ್ಲಿ ಇಷ್ಟು ರೇಟಿಂಗ್ ಅಂಕಗಳನ್ನು ಗಳಿಸಲು ಸಾಧ್ಯವಾಗಿರಲಿಲ್ಲ.

ಜಸ್ಪ್ರೀತ್ ಬುಮ್ರಾ ಮೊದಲು, ಆರ್ ಅಶ್ವಿನ್ ಐಸಿಸಿ ಶ್ರೇಯಾಂಕದ ಇತಿಹಾಸದಲ್ಲಿ ಅತಿ ಹೆಚ್ಚು ರೇಟಿಂಗ್ ಪಾಯಿಂಟ್ ಪಡೆದ ಭಾರತದ ಟೆಸ್ಟ್ ಬೌಲರ್ ಆಗಿದ್ದರು. ಕಳೆದ ಬಾರಿಯ ರ್ಯಾಂಕಿಂಗ್ ಪಟ್ಟಿಯಲ್ಲಿ ಅಶ್ವಿನ್ರನ್ನು ಸರಿಗಟ್ಟಿದ್ದ ಬುಮ್ರಾ ಇದೀಗ ನಂಬರ್ 1 ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ.

ಅಶ್ವಿನ್ ಡಿಸೆಂಬರ್ 2016 ರಲ್ಲಿ 904 ರೇಟಿಂಗ್ ಪಾಯಿಂಟ್‌ಗಳನ್ನು ಪಡೆದುಕೊಳ್ಳುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತದ ಬೌಲರ್ ಎನಿಸಿಕೊಂಡಿದ್ದರು. ಇದೀಗ 907 ರೇಟಿಂಗ್ ಪಾಯಿಂಟ್ ಪಡೆದಿರುವ ಬುಮ್ರಾ, ಅಶ್ವಿನ್ರ ದಾಖಲೆಯನ್ನು ಪುಡಿಗಟ್ಟಿದ್ದಾರೆ. ಇದಲ್ಲದೆ ಬುಮ್ರಾ ವಿಶ್ವ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರೇಟಿಂಗ್ ಪಾಯಿಂಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಇದೀಗ ಇಂಗ್ಲೆಂಡ್‌ನ ಡೆರೆಕ್ ಅಂಡರ್‌ವುಡ್ ಅವರೊಂದಿಗೆ ಜಂಟಿಯಾಗಿ 17 ನೇ ಸ್ಥಾನಕ್ಕೆ ಬಂದಿದ್ದಾರೆ.

ವಾಸ್ತವವಾಗಿ 2024 ರಲ್ಲಿ ಜಸ್ಪ್ರೀತ್ ಬುಮ್ರಾ ಅವರ ಪ್ರದರ್ಶನ ಅಮೋಘವಾಗಿತ್ತು. ಕಳೆದ ವರ್ಷ ಆಡಿದ 21 ಅಂತರಾಷ್ಟ್ರೀಯ ಸೀಮಿತ ಓವರ್ಗಳ ಪಂದ್ಯಗಳಲ್ಲಿ ಬುಮ್ರಾ 13.76 ಸರಾಸರಿಯಲ್ಲಿ 86 ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಐದು ಬಾರಿ 5 ವಿಕೆಟ್ ಪಡೆದ ಸಾಧನೆಯನ್ನೂ ಮಾಡಿದ್ದಾರೆ.

ಇದರ ಜೊತೆಗೆ ಕಳೆದ ವರ್ಷ ಆಡಿದ 13 ಟೆಸ್ಟ್ ಪಂದ್ಯಗಳಲ್ಲಿ 71 ವಿಕೆಟ್ಗಳನ್ನು ಪಡೆದಿದ್ದರು. ಮತ್ತೊಂದೆಡೆ, ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಇದುವರೆಗೆ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿರುವ ಬುಮ್ರಾ ಆಡಿರುವ 4 ಪಂದ್ಯಗಳಲ್ಲಿ 30 ವಿಕೆಟ್ಗಳನ್ನು ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಬುಮ್ರಾ ಅವರ ಹತ್ತಿರ ಯಾವುದೇ ಬೌಲರ್ ಇಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.









