Joe Root: ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಜೋ ರೂಟ್
Joe Root Records: 146 ಟೆಸ್ಟ್ ಪಂದ್ಯಗಳಲ್ಲಿ 237 ಇನಿಂಗ್ಸ್ ಆಡಿರುವ ಜೋ ರೂಟ್ 34 ಶತಕ ಹಾಗೂ 68 ಅರ್ಧಶತಕಗಳೊಂದಿಗೆ ಒಟ್ಟು 12402 ರನ್ ಕಲೆಹಾಕಿದ್ದಾರೆ. ಈ ಮೂಲಕ ಕುಮಾರ ಸಂಗಾಕ್ಕರ ಅವರನ್ನು ಹಿಂದಿಕ್ಕಿ ಟೆಸ್ಟ್ ರನ್ ಸರದಾರರ ಪಟ್ಟಿಯಲ್ಲಿ 6ನೇ ಸ್ಥಾನ ಅಲಂಕರಿಸಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಪರ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ.
Updated on: Sep 10, 2024 | 11:55 AM

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 2-1 ಅಂತರದಿಂದ ಗೆದ್ದುಕೊಂಡಿದೆ. ಈ ಸರಣಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಜೋ ರೂಟ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪ್ರಶಸ್ತಿಯೊಂದಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮುರಿದು ರೂಟ್ ಮುನ್ನುಗ್ಗಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಒಟ್ಟು 6 ಇನಿಂಗ್ಸ್ ಆಡಿರುವ ಜೋ ರೂಟ್ 2 ಭರ್ಜರಿ ಶತಕ ಹಾಗೂ 1 ಅರ್ಧಶತಕದೊಂದಿಗೆ ಒಟ್ಟು 375 ರನ್ ಕಲೆಹಾಕಿದ್ದಾರೆ. ಈ ಶ್ರೇಷ್ಠ ಪ್ರದರ್ಶನದಿಂದಾಗಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಟೆಸ್ಟ್ನಲ್ಲಿ ಇಂಗ್ಲೆಂಡ್ ಪರ ಅತ್ಯಧಿಕ ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ನ ಆ್ಯಂಡ್ರ್ಯೂ ಸ್ಟ್ರಾಸ್, ಅಲೆಸ್ಟಕ್ ಕುಕ್ ಹಾಗೂ ಗ್ರಹಾಂ ಗೂಚ್ ಹೆಸರಿನಲ್ಲಿತ್ತು. ಈ ಮೂವರು ಆಟಗಾರರು 5 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು. ಇದೀಗ 6ನೇ ಬಾರಿ ಪ್ಲೇಯರ್ ಆಫ್ ಸಿರೀಸ್ ಪ್ರಶಸ್ತಿ ಪಡೆಯುವ ಮೂಲಕ ಜೋ ರೂಟ್ ಇಂಗ್ಲೆಂಡ್ನ ಮಾಜಿ ಆಟಗಾರರ ಸಾಧನೆಯನ್ನು ಹಿಂದಿಕ್ಕಿದ್ದಾರೆ.

ಹಾಗೆಯೇ ಸರಣಿ ಶ್ರೇಷ್ಠ ಪ್ರಶಸ್ತಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಕೂಡ ಮುರಿದಿದ್ದಾರೆ. ಟೀಮ್ ಇಂಡಿಯಾ ಪರ 74 ಟೆಸ್ಟ್ ಸರಣಿಗಳನ್ನು ಆಡಿರುವ ಸಚಿನ್ ತೆಂಡೂಲ್ಕರ್ ಒಟ್ಟು 5 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಇದೀಗ 48 ಟೆಸ್ಟ್ ಸರಣಿಗಳ ಮೂಲಕ ಜೋ ರೂಟ್ 6ನೇ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಐದಕ್ಕಿಂತ ಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಶ್ರೀಲಂಕಾದ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್. ಲಂಕಾ ಪರ 61 ಟೆಸ್ಟ್ ಸರಣಿಗಳನ್ನಾಡಿರುವ ಮುರಳೀಧರನ್ ಒಟ್ಟು 11 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಸ್ಪಿನ್ ಮಾಂತ್ರಿಕ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ ಪ್ಲೇಯರ್ ಆಫ್ ದಿ ಸಿರೀಸ್ ಪ್ರಶಸ್ತಿ ಪಡೆದ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
