KL Rahul: ಬರೋಬ್ಬರಿ 1066 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್
KL Rahul Records: ಅ್ಯಂಡರ್ಸನ್-ತೆಂಡೂಲ್ಕರ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಕೆಎಲ್ ರಾಹುಲ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ದಾಖಲೆಗಳೊಂದಿಗೆ 532 ರನ್ ಕಲೆಹಾಕಿರುವ ಕನ್ನಡಿಗ ಇದೀಗ ಎಸೆತಗಳನ್ನು ಎದುರಿಸಿದ ವಿಷಯದಲ್ಲೂ ಟಾಪ್-3 ಗೆ ಎಂಟ್ರಿ ಕೊಟ್ಟಿದ್ದಾರೆ. ಇದಾಗ್ಯೂ ಸುನಿಲ್ ಗವಾಸ್ಕರ್ ಹೆಸರಿನಲ್ಲಿದ್ದ 2 ದಾಖಲೆಗಳನ್ನು ಮುರಿಯಲು ಸಾಧ್ಯವಾಗಿಲ್ಲ.
Updated on:Aug 03, 2025 | 7:58 AM

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಟೀಮ್ ಇಂಡಿಯಾ ಪರ ವಿದೇಶಿ ಸರಣಿವೊಂದರಲ್ಲಿ ಕೇವಲ ಮೂವರು ಆರಂಭಿಕರು ಮಾತ್ರ ಸಾವಿರಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಸುನಿಲ್ ಗವಾಸ್ಕರ್. ದ್ವಿತೀಯ ಸ್ಥಾನದಲ್ಲಿರುವುದು ಮುರಳಿ ವಿಜಯ್. ಇದೀಗ ಈ ಪಟ್ಟಿಗೆ ಕೆಎಲ್ ರಾಹುಲ್ (KL Rahul) ಕೂಡ ಸೇರ್ಪಡೆಯಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 10 ಇನಿಂಗ್ಸ್ ಆಡಿರುವ ಕೆಎಲ್ ರಾಹುಲ್ ಎದುರಿಸಿರುವುದು ಬರೋಬ್ಬರಿ 1066 ಎಸೆತಗಳನ್ನು. ಕಳೆದ 11 ವರ್ಷಗಳಲ್ಲಿ ಟೀಮ್ ಇಂಡಿಯಾ ಪರ ಯಾವುದೇ ಆರಂಭಿಕ ದಾಂಡಿಗ ವಿದೇಶಿ ಟೆಸ್ಟ್ ಸರಣಿವೊಂದರಲ್ಲಿ 1000 ಎಸೆತಗಳನ್ನು ಎದುರಿಸಲು ಸಾಧ್ಯವಾಗಿರಲಿಲ್ಲ.

ಆದರೆ ಈ ಬಾರಿ ಆಂಗ್ಲ ಬೌಲರ್ಗಳ ಮುಂದೆ ಸೆಟೆದು ನಿಂತ ಕೆಎಲ್ ರಾಹುಲ್ ಬರೋಬ್ಬರಿ 1066 ಎಸೆತಗಳನ್ನು ಎದುರಿಸಿದ್ದಾರೆ. ಈ ವೇಳೆ ಅವರ ಬ್ಯಾಟ್ನಿಂದ 532 ರನ್ಗಳು ಮೂಡಿಬಂದಿವೆ. ಈ 532 ರನ್ಗಳಲ್ಲಿ ಬರೋಬ್ಬರಿ 69 ಫೋರ್ಗಳಿವೆ. ಹಾಗೆಯೇ ಇದರ ನಡುವೆ 2 ಶತಕ ಹಾಗೂ 2 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ.

ಇನ್ನು ಈ ಬಾರಿ ಆರಂಭಿಕನಾಗಿ ಕಣಕ್ಕಿಳಿದು ಕಲೆಹಾಕಿರುವ 532 ರನ್ಗಳು ಇಂಗ್ಲೆಂಡ್ ವಿರುದ್ಧದ ಟೆಸ್ಟ್ನಲ್ಲಿ ಭಾರತೀಯ ಆರಂಭಿಕನೊಬ್ಬ ಕಲೆಹಾಕಿದ 2ನೇ ಗರಿಷ್ಠ ಮೊತ್ತ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಟೀಮ್ ಇಂಡಿಯಾದ ಲೆಜೆಂಡ್ ಸುನಿಲ್ ಗವಾಸ್ಕರ್. 1979 ರಲ್ಲಿ ಗವಾಸ್ಕರ್ ಇಂಗ್ಲೆಂಡ್ ವಿರುದ್ಧ 542 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ.

ಇದೀಗ ಸುನಿಲ್ ಗವಾಸ್ಕರ್ (1199 ಎಸೆತಗಳು) ಹಾಗೂ ಮುರಳಿ ವಿಜಯ್ (1054) ಅವರ ಬಳಿಕ ಕೆಎಲ್ ರಾಹುಲ್ ವಿದೇಶಿ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ಬಾಲ್ಗಳನ್ನು ಎದುರಿಸಿದ ಆರಂಭಿಕ ದಾಂಡಿಗ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ 532 ರನ್ ಕಲೆಹಾಕಿ ಆಂಗ್ಲರ ನಾಡಿನಲ್ಲಿ 4 ದಶಕಗಳ ಬಳಿಕ ಅತ್ಯುತ್ತಮ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಓಪನರ್ ಎನಿಸಿಕೊಂಡಿದ್ದಾರೆ.
Published On - 7:57 am, Sun, 3 August 25
