- Kannada News Photo gallery Cricket photos Kuldeep Yadav Shatters shane Warne and Yuzvendra Chahal Records with 4 Wickets vs South Africa
IND vs SA: ರಾಂಚಿ ನೆಲದಲ್ಲಿ ಶೇನ್ ವಾರ್ನ್, ಯುಜುವೇಂದ್ರ ಚಾಹಲ್ ದಾಖಲೆ ಮುರಿದ ಕುಲ್ದೀಪ್
Kuldeep Yadav Makes History: ಕುಲ್ದೀಪ್ ಯಾದವ್ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿ ಹೊಸ ಇತಿಹಾಸ ನಿರ್ಮಿಸಿದರು. ಆಸೀಸ್ ದಿಗ್ಗಜ ಶೇನ್ ವಾರ್ನ್ ಅವರ 23 ವರ್ಷಗಳ ಹಳೆಯ ದಾಖಲೆ ಹಾಗೂ ಯುಜುವೇಂದ್ರ ಚಾಹಲ್ ಅವರ ದಾಖಲೆಯನ್ನು ಮುರಿದಿದ್ದಾರೆ. ಇದು ದಕ್ಷಿಣ ಆಫ್ರಿಕಾ ವಿರುದ್ಧ ಸ್ಪಿನ್ನರ್‌ನಿಂದ ನಾಲ್ಕನೇ ಬಾರಿಗೆ 4 ವಿಕೆಟ್ ಸಾಧನೆಯಾಗಿದ್ದು, ಅನಿಲ್ ಕುಂಬ್ಳೆ ದಾಖಲೆಯನ್ನೂ ಸರಿಗಟ್ಟಿದ್ದಾರೆ.
Updated on: Dec 01, 2025 | 5:15 PM

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಹೀನಾಯವಾಗಿ ಸೋತಿದ್ದ ಟೀಂ ಇಂಡಿಯಾ ಏಕದಿನ ಸರಣಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಶತಕ ಮತ್ತು ಕುಲ್ದೀಪ್ ಯಾದವ್ ಅವರ ನಾಲ್ಕು ವಿಕೆಟ್ಗಳ ಸಹಾಯದಿಂದ ಆಫ್ರಿಕಾ ತಂಡವನ್ನು 17 ರನ್‌ಗಳಿಂದ ಮಣಿಸಿತು.

ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕುಲ್ದೀಪ್ ಯಾದವ್ ಈ ಪಂದ್ಯದಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದು ಮಾತ್ರವಲ್ಲದೆ ಆಸೀಸ್ ಲೆಜೆಂಡ್ ಶೇನ್ ವಾರ್ನ್ ಅವರ 23 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಹಾಗೆಯೇ ಟೀಂ ಇಂಡಿಯಾ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರ ದಾಖಲೆಯನ್ನು ಪುಡಿಗಟ್ಟಿದರು.

ರಾಂಚಿಯ ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ, ಕುಲ್ದೀಪ್ ಯಾದವ್ 10 ಓವರ್ ಬೌಲಿಂಗ್ ಮಾಡಿ 68 ರನ್ ನೀಡಿ 4 ವಿಕೆಟ್‌ಗಳನ್ನು ಪಡೆದರು. ಈ ಮೂಲಕ ಆಫ್ರಿಕಾ ವಿರುದ್ಧ ನಾಲ್ಕನೇ ಬಾರಿಗೆ ನಾಲ್ಕು ವಿಕೆಟ್ ಕಬಳಿಸಿದ ಸಾಧನೆ ಮಾಡಿದರು. ಇದರೊಂದಿಗೆ ಕುಲ್ದೀಪ್, ಶೇನ್ ವಾರ್ನ್ ಮತ್ತು ಯುಜ್ವೇಂದ್ರ ಚಾಹಲ್ ಅವರ ದಾಖಲೆಗಳನ್ನು ಮುರಿದಿದ್ದಾರೆ.

ವಾಸ್ತವವಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ ನಾಲ್ಕು ವಿಕೆಟ್ ಕಬಳಿಸಿದ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಕುಲ್ದೀಪ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಕುಲ್ದೀಪ್ 2018 ರಲ್ಲಿ ಕೇಪ್ ಟೌನ್ ಮತ್ತು ಗ್ವಾಲಿಯರ್‌ನಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ ಹಾಗೂ 2022 ರಲ್ಲಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲೂ ನಾಲ್ಕು ವಿಕೆಟ್ ಕಬಳಿಸಿದ್ದರು.

ಇದರೊಂದಿಗೆ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ವೃತ್ತಿಜೀವನದಲ್ಲಿ ತಲಾ 3 ಬಾರಿ 4 ವಿಕೆಟ್‌ಗಳನ್ನು ಪಡೆದಿದ್ದ ಆಸೀಸ್ ದಿಗ್ಗಜ ಶೇನ್ ವಾರ್ನ್ ಹಾಗೂ ಭಾರತದ ಗೂಗ್ಲಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರ ದಾಖಲೆಯನ್ನು ಕುಲ್ದೀಪ್ ಮುರಿದರು.

ತಮ್ಮ ಏಕದಿನ ವೃತ್ತಿಜೀವನದಲ್ಲಿ 10 ನೇ ಬಾರಿಗೆ ನಾಲ್ಕು ವಿಕೆಟ್ ಕಬಳಿಸಿದ ಕುಲ್ದೀಪ್ ಇದರೊಂದಿಗೆ ಕನ್ನಡಿಗ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಸಹ ಸರಿಗಟ್ಟಿದರು. ಇನ್ನು ಈ ವಿಚಾರದಲ್ಲಿ ಭಾರತದ ಮಾಜಿ ವೇಗದ ಬೌಲರ್‌ಗಳಾದ ಅಜಿತ್ ಅಗರ್ಕರ್ (12) ಮತ್ತು ಮೊಹಮ್ಮದ್ ಶಮಿ (16) ಮಾತ್ರ ಕುಲ್ದೀಪ್ ಅವರಿಗಿಂತ ಮುಂದಿದ್ದಾರೆ.




