- Kannada News Photo gallery Cricket photos Mayank Agarwal and Karun Nair Most runs in Vijay Hazare Trophy 2024-25
ಬರೋಬ್ಬರಿ 8 ಶತಕಗಳು: ದೇಶೀಯ ಅಂಗಳದಲ್ಲಿ ಕನ್ನಡಿಗರ ಕಮಾಲ್
Vijay Hazare Trophy 2024-25: ಈ ಬಾರಿಯ ವಿಜಯ ಹಝಾರೆ ಟೂರ್ನಿಯಲ್ಲಿ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶಿಸಿರುವ ಮಯಾಂಕ್ ಅಗರ್ವಾಲ್ ಹಾಗೂ ಕರುಣ್ ನಾಯರ್ ಮತ್ತೆ ಭಾರತ ತಂಡದಲ್ಲಿ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಮಯಾಂಕ್ ಅಗರ್ವಾಲ್ ಕೊನೆಯ ಬಾರಿಗೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದು 2022 ರಲ್ಲಿ, ಹಾಗೆಯೇ ಕರುಣ್ ನಾಯರ್ ಕೊನೆಯ ಬಾರಿ ಟೀಮ್ ಇಂಡಿಯಾ ಪ್ರತಿನಿಧಿಸಿದ್ದು 2017 ರಲ್ಲಿ. ಇದೀಗ ಇಬ್ಬರು ಕನ್ನಡಿಗರು ಭರ್ಜರಿ ಪ್ರದರ್ಶನದೊಂದಿಗೆ ಭಾರತ ತಂಡದ ಕದ ತಟ್ಟಿದ್ದಾರೆ.
Updated on: Jan 08, 2025 | 11:53 AM

ವಿಜಯ ಹಝಾರೆ ಟೂರ್ನಿಯಲ್ಲಿ ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಹಾಗೂ ಕರುಣ್ ನಾಯರ್ ಅಬ್ಬರ ಮುಂದುವರೆದಿದೆ. ಮಯಾಂಕ್ ಕರ್ನಾಟಕ ಪರ ಅಬ್ಬರಿಸುತ್ತಿದ್ದರೆ, ಕರುಣ್ ವಿದರ್ಭ ಪರ ಆರ್ಭಟಿಸುತ್ತಿದ್ದಾರೆ. ಈ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈವರೆಗೆ 7 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ 4 ಭರ್ಜರಿ ಶತಕ ಹಾಗೂ 1 ಅರ್ಧಶತಕದೊಂದಿಗೆ 613 ರನ್ ಕಲೆಹಾಕಿದ್ದಾರೆ. ವಿಶೇಷ ಎಂದರೆ ಏಳು ಇನಿಂಗ್ಸ್ಗಳಲ್ಲಿ ಮಯಾಂಕ್ ಮೂರು ಬಾರಿ ನಾಟೌಟ್ ಆಗಿ ಉಳಿದಿದ್ದಾರೆ. ಅಲ್ಲದೆ 18 ಸಿಕ್ಸ್ ಹಾಗೂ 66 ಫೋರ್ಗಳನ್ನು ಬಾರಿಸಿ ಅಬ್ಬರಿಸಿದ್ದಾರೆ.

ಮತ್ತೊಂದೆಡೆ ವಿದರ್ಭ ತಂಡದ ನಾಯಕರಾಗಿ ಕಣಕ್ಕಿಳಿಯುತ್ತಿರುವ ಕರ್ನಾಟಕದ ಮಾಜಿ ಆಟಗಾರ ಕರುಣ್ ನಾಯರ್ 5 ಇನಿಂಗ್ಸ್ಗಳಲ್ಲಿ 4 ಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ 542 ರನ್ ಕಲೆಹಾಕಿದ್ದಾರೆ. ಇದರ ನಡುವೆ 67 ಸಿಕ್ಸ್ ಹಾಗೂ 6 ಫೋರ್ಗಳನ್ನು ಬಾರಿಸಿದ್ದಾರೆ. ಇಂಟ್ರೆಸ್ಟಿಂಗ್ ವಿಷಯ ಎಂದರೆ 5 ಇನಿಂಗ್ಸ್ಗಳಲ್ಲಿ ಕರುಣ್ ನಾಯರ್ 4 ಬಾರಿ ಅಜೇಯರಾಗಿ ಉಳಿದಿದ್ದಾರೆ.

ಇನ್ನು ಈ ಬಾರಿಯ ವಿಜಯ ಹಝಾರೆ ಟೂರ್ನಿಯ 7 ಪಂದ್ಯಗಳ ಮುಕ್ತಾಯದ ವೇಳೆಗೆ 500+ ರನ್ ಕಲೆಹಾಕಿರುವುದು ಮಯಾಂಕ್ ಅಗರ್ವಾಲ್ ಮತ್ತು ಕರುಣ್ ನಾಯರ್ ಮಾತ್ರ ಎಂಬುದು ವಿಶೇಷ. ಅಲ್ಲದೆ ಅತೀ ಹೆಚ್ಚು ಶತಕ ಸಿಡಿಸಿದ್ದು ಕೂಡ ಇವರೇ. ಹೀಗಾಗಿ ಇದೀಗ ಇಬ್ಬರು ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಎದುರು ನೋಡುತ್ತಿದ್ದಾರೆ.

ಮುಂಬರುವ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿಗಾಗಿ ಶೀಘ್ರದಲ್ಲೇ ಭಾರತ ತಂಡವನ್ನು ಆಯ್ಕೆ ಮಾಡಲಿದೆ. ಇದೀಗ ದೇಶೀಯ ಅಂಗಳದ ಏಕದಿನ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿರುವ ಮಯಾಂಕ್ ಅಗರ್ವಾಲ್ ಹಾಗೂ ಕರುಣ್ ನಾಯರ್ಗೆ ಮತ್ತೆ ಭಾರತ ತಂಡದಲ್ಲಿ ಸ್ಥಾನ ಸಿಗಲಿದೆಯಾ ಕಾದು ನೋಡಬೇಕಿದೆ.



















