MLC 2025: ಪ್ಲೇಆಫ್ ಸುತ್ತಿಗೆ 4 ತಂಡಗಳ ಎಂಟ್ರಿ: ಇಲ್ಲಿದೆ ವೇಳಾಪಟ್ಟಿ
Major League Cricket 2025: ಮೇಜರ್ ಲೀಗ್ ಕ್ರಿಕೆಟ್ ಟಿ20 ಟೂರ್ನಿಯ ಮೊದಲ ಸುತ್ತಿನಲ್ಲೇ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಹಾಗೂ ಸಿಯಾಟಲ್ ಓರ್ಕಾಸ್ ತಂಡಗಳು ಹೊರಬಿದ್ದಿದೆ. ಇನ್ನುಳಿದಿರುವ ನಾಲ್ಕು ತಂಡಗಳು ಜುಲೈ 8 ರಿಂದ ಶುರುವಾಗಲಿರುವ ಪ್ಲೇಆಫ್ ಸುತ್ತಿನಲ್ಲಿ ಕಣಕ್ಕಿಳಿಯಲಿವೆ.
Updated on: Jul 08, 2025 | 9:59 AM

ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ (MLC 2025) ಟೂರ್ನಿಯ ಮೂರನೇ ಆವೃತ್ತಿಯು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಆರು ತಂಡಗಳೊಂದಿಗೆ ಶುರುವಾದ ಈ ಟೂರ್ನಿಯ ದ್ವಿತೀಯ ಸುತ್ತಿಗೆ 4 ತಂಡಗಳು ಎಂಟ್ರಿ ಕೊಟ್ಟಿದ್ದು , 2 ಟೀಮ್ಗಳು ಟೂರ್ನಿಯಿಂದ ಹೊರಬಿದ್ದಿದೆ. ಅದರಂತೆ ಈ ಬಾರಿ ಪ್ಲೇಆಫ್ ಆಡಲಿರುವ ನಾಲ್ಕು ತಂಡಗಳು ಈ ಕೆಳಗಿನಂತಿವೆ...

ಈ ಬಾರಿಯ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಗ್ಲೆನ್ ಮ್ಯಾಕ್ಸ್ವೆಲ್ ನಾಯಕತ್ವದ ವಾಷಿಂಗ್ಟನ್ ಫ್ರೀಡಂ ತಂಡವು 10 ಮ್ಯಾಚ್ಗಳಲ್ಲಿ 8 ಗೆಲುವು ದಾಖಲಿಸಿದೆ. ಈ ಮೂಲಕ 16 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಅಲಂಕರಿಸಿ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ.

ಫಾಫ್ ಡುಪ್ಲೆಸಿಸ್ ಮುಂದಾಳತ್ವದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು ಅದ್ಭುತ ಪ್ರದರ್ಶನ ನೀಡಿದ್ದು, 10 ಮ್ಯಾಚ್ಗಳಲ್ಲಿ 7 ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಮೊದಲ ಕ್ವಾಲಿಫೈಯರ್ ಪಂದ್ಯವಾಡಲು ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಮ್ಯಾಥ್ಯೂ ಶಾರ್ಟ್ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿರುವ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡವು 10 ಪಂದ್ಯಗಳಲ್ಲಿ 7 ಜಯ ಸಾಧಿಸಿದೆ. ಇದಾಗ್ಯೂ ನೆಟ್ ರನ್ ರೇಟ್ನಲ್ಲಿ ಹಿಂದುಳಿಯುವ ಮೂಲಕ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡವು ಎಲಿಮಿನೇಟರ್ ಪಂದ್ಯವಾಡಲಿದೆ.

ಹಾಗೆಯೇ ಮೊದಲ 5 ಪಂದ್ಯಗಳಲ್ಲಿ ಕೇವಲ 1 ಜಯ ಸಾಧಿಸಿದ್ದ ಎಂಐ ನ್ಯೂಯಾರ್ಕ್ ತಂಡವು ಉಳಿದ 5 ಮ್ಯಾಚ್ಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ಒಟ್ಟು 6 ಗೆಲುವುಗಳೊಂದಿಗೆ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಎಲಿಮಿನೇಟರ್ ಪಂದ್ಯದಲ್ಲಿ ಕಣಕ್ಕಿಳಿಯಲು ನಿಕೋಲಸ್ ಪೂರನ್ ಪಡೆ ಸಜ್ಜಾಗಿದೆ.

ಜುಲೈ 8 ರಂದು ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ಹಾಗೂ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಡಲ್ಲಾಸ್ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ಗೆ ಪ್ರವೇಶಿಸಲಿದೆ.

ಇನ್ನು ಜುಲೈ 9 ರಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್ ಹಾಗೂ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೂ ಡಲ್ಲಾಸ್ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ ಆತಿಥ್ಯವಹಿಸಲಿದೆ. ಇನ್ನು ಈ ಮ್ಯಾಚ್ನಲ್ಲಿ ಗೆದ್ದ ತಂಡ ಹಾಗೂ ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂಡಗಳು ಜುಲೈ 12 ರಂದು ದ್ವಿತೀಯ ಕ್ವಾಲಿಫೈಯರ್ನಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಜುಲೈ 13 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ.




