Moeen Ali: ಯುವರಾಜ್ ಸಿಂಗ್ರ ಅಪರೂಪದ ದಾಖಲೆ ಸರಿಗಟ್ಟಿದ ಮೊಯೀನ್ ಅಲಿ
BPL 2024: ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ನಲ್ಲಿ ಕೊಮಿಲ್ಲಾ ವಿಕ್ಟೋರಿಯನ್ಸ್ ಪರ ಆಡುತ್ತಿರುವ ಇಂಗ್ಲೆಂಡ್ ಆಲ್ರೌಂಡರ್ ಮೊಯೀನ್ ಅಲಿ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ 2009 ರಲ್ಲಿ ಯುವರಾಜ್ ಸಿಂಗ್ ಬರೆದಿದ್ದ ಅಪರೂಪದ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ. ಆ ದಾಖಲೆ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...
Updated on: Feb 14, 2024 | 3:08 PM

ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಮೂಲಕ ಮೊಯೀನ್ ಅಲಿ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಯುವರಾಜ್ ಸಿಂಗ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬರೆದಿದ್ದ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.

ಚಟ್ಟೋಗ್ರಾಮ್ ಚಾಲೆಂಜರ್ಸ್ ವಿರುದ್ಧದ ಈ ಪಂದ್ಯದಲ್ಲಿ ಕೊಮಿಲ್ಲಾ ವಿಕ್ಟೋರಿಯನ್ಸ್ ಪರ ಕಣಕ್ಕಿಳಿದಿದ್ದ ಮೊಯೀನ್ ಅಲಿ ಆಲ್ರೌಂಡರ್ ಆಟದೊಂದಿಗೆ ಮಿಂಚಿದರು. ಮೊದಲು ಬ್ಯಾಟ್ ಮಾಡಿದ ಕೊಮಿಲ್ಲಾ ಪರ ವಿಲ್ ಜಾಕ್ಸ್ (108) ಶತಕ ಬಾರಿಸಿದರೆ, ಮೊಯೀನ್ ಅಲಿ (53) ಅರ್ಧಶತಕ ಸಿಡಿಸಿದ್ದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕೊಮಿಲ್ಲಾ ವಿಕ್ಟೋರಿಯನ್ಸ್ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 239 ರನ್ ಕಲೆಹಾಕಿತು.

240 ರನ್ಗಳ ಕಠಿಣ ಗುರಿ ಪಡೆದ ಚಟ್ಟೋಗ್ರಾಮ್ ಚಾಲೆಂಜರ್ಸ್ ತಂಡವು ಮೊದಲ ವಿಕೆಟ್ಗೆ 80 ರನ್ ಕಲೆಹಾಕಿದರೂ ಆ ಬಳಿಕ ಮೊಯೀನ್ ಅಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದರು. 17ನೇ ಓವರ್ನ ಮೊದಲ ಎಸೆತದಲ್ಲಿ ಶೊಹಿದುಲ್ ಇಸ್ಲಾಂ (2) ವಿಕೆಟ್ ಪಡೆದ ಮೊಯೀನ್ ಅಲಿ, 2ನೇ ಎಸೆತದಲ್ಲಿ ಅಲ್ ಅಮೀನ್ ಅವರನ್ನು ಔಟ್ ಮಾಡಿದರು. ಇನ್ನು ಮೂರನೇ ಎಸೆತದಲ್ಲಿ ಬಿಲಾಲ್ ಖಾನ್ ಅವರ ವಿಕೆಟ್ ಕಬಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು.

ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಅರ್ಧಶತಕ ಬಾರಿಸಿ, ಹ್ಯಾಟ್ರಿಕ್ ವಿಕೆಟ್ ಪಡೆದ ವಿಶೇಷ ದಾಖಲೆಯನ್ನು ಮೊಯೀನ್ ಅಲಿ ಬರೆದರು. ಇದಕ್ಕೂ ಮುನ್ನ ಯುವರಾಜ್ ಸಿಂಗ್ ಇಂತಹದೊಂದು ಅಪರೂಪದ ದಾಖಲೆ ಬರೆದಿದ್ದರು.

2009 ರಲ್ಲಿ ಆರ್ಸಿಬಿ ವಿರುದ್ಧ ಪಂದ್ಯದಲ್ಲಿ ಕಿಂಗ್ ಇಲೆವೆನ್ ಪಂಜಾಬ್ ಪರ ಕಣಕ್ಕಿಳಿದಿದ್ದ ಯುವರಾಜ್ ಸಿಂಗ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದರು. ಅಲ್ಲದೆ ಇದೇ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಅವರು 34 ಎಸೆತಗಳಲ್ಲಿ 50 ರನ್ ಬಾರಿಸಿದ್ದರು. ಈ ಮೂಲಕ ಒಂದೇ ಪಂದ್ಯದಲ್ಲಿ ಅರ್ಧಶತಕದ ಜೊತೆಗೆ ಹ್ಯಾಟ್ರಿಕ್ ವಿಕೆಟ್ ಪಡೆದ ಅಪರೂಪದ ದಾಖಲೆಯೊಂದನ್ನು ಯುವರಾಜ್ ಸಿಂಗ್ ಬರೆದಿದ್ದರು.

ಇದೀಗ ಚಟ್ಟೋಗ್ರಾಮ್ ಚಾಲೆಂಜರ್ಸ್ ವಿರುದ್ಧದ ಪಂದ್ಯದಲ್ಲಿ ಮೊಯೀನ್ ಅಲಿ 53 ರನ್ಗಳನ್ನು ಬಾರಿಸಿ ಆ ಬಳಿಕ ಬೌಲಿಂಗ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ. ಈ ಮೂಲಕ ಯುವರಾಜ್ ಸಿಂಗ್ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ಮೊಯೀನ್ ಅಲಿ ಸರಿಗಟ್ಟಿದ್ದಾರೆ.

ಇನ್ನು ಈ ಪಂದ್ಯದಲ್ಲಿ 3.3 ಓವರ್ಗಳನ್ನು ಎಸೆದ ಮೊಯೀನ್ ಅಲಿ ಕೇವಲ 23 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇದರೊಂದಿಗೆ ಚಟ್ಟೋಗ್ರಾಮ್ ಚಾಲೆಂಜರ್ಸ್ 16.3 ಓವರ್ಗಳಲ್ಲಿ 166 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಕೊಮಿಲ್ಲಾ ವಿಕ್ಟೋರಿಯನ್ಸ್ ತಂಡ 73 ರನ್ಗಳ ಭರ್ಜರಿ ಜಯ ಸಾಧಿಸಿದೆ.



















