- Kannada News Photo gallery Cricket photos Mohammed Siraj likely to be 'charged' by ICC following heated exchange
ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ಗೆ ನಿಷೇಧದ ಭೀತಿ..!
India vs Australia: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಆಟಗಾರರ ಮಾತಿನ ಚಕಮಕಿಗೆ ಸಾಕ್ಷಿಯಾಗಿತ್ತು. ಅದರಲ್ಲೂ ಮೊಹಮ್ಮದ್ ಸಿರಾಜ್ ಹಾಗೂ ಟ್ರಾವಿಸ್ ಹೆಡ್ ಪರಸ್ಪರ ಕಿತ್ತಾಡಿಕೊಂಡಿದ್ದರು. ಇದೀಗ ಈ ಘಟನೆಗಳನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿದೆ.
Updated on: Dec 09, 2024 | 1:06 PM

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಅನುಚಿತವಾಗಿ ವರ್ತಿಸಿದ ಕಾರಣಕ್ಕಾಗಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ವಿರುದ್ಧ ಐಸಿಸಿ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದ ವೇಳೆ ಟ್ರಾವಿಸ್ ಹೆಡ್ ಅವರನ್ನು ಬೌಲ್ಡ್ ಮಾಡಿದ ಸಿರಾಜ್, ಪೆವಿಲಿಯನ್ಗೆ ದಾಟುವಂತೆ ಕೈ ಸನ್ನೆ ಮಾಡಿದ್ದರು.

ಈ ಘಟನೆಯನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿದ್ದು, ಹೀಗಾಗಿ ಮೊಹಮ್ಮದ್ ಸಿರಾಜ್ ಹಾಗೂ ಟ್ರಾವಿಸ್ ಹೆಡ್ ಮ್ಯಾಚ್ ರೆಫರಿಯ ವಿಚಾರಣೆಗೆ ಒಳಪಡಲಿದ್ದಾರೆ. ಇದಾದ ಬಳಿಕ ಮ್ಯಾಚ್ ರೆಫರಿ ಐಸಿಸಿ ನೀತಿ ಸಂಹಿತೆಯ ಉಲ್ಲಂಘನೆಯಡಿಯಲ್ಲಿ ಶಿಕ್ಷೆ ವಿಧಿಸಲಿದ್ದಾರೆ.

ಇತ್ತ ಮೊಹಮ್ಮದ್ ಸಿರಾಜ್ ಅವರ ವರ್ತನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹೀಗಾಗಿಯೇ ಟೀಮ್ ಇಂಡಿಯಾ ವೇಗಿಗೆ ನಿಷೇಧದ ಶಿಕ್ಷೆ ನೀಡಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಐಸಿಸಿ ನೀತಿ ಸಂಹಿತೆಯ ಗಂಭೀರ ಉಲ್ಲಂಘನೆ ಮಾಡಿದವರಿಗೆ ಕೆಲ ಪಂದ್ಯಗಳ ನಿಷೇಧ ಹೇರಲಾಗುತ್ತದೆ.

ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಐಸಿಸಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದರೂ, ಸಿರಾಜ್ ಅವರನ್ನು ಯಾವುದೇ ಪಂದ್ಯದಿಂದ ಅಮಾನತು ಮಾಡುವ ಸಾಧ್ಯತೆಯಿಲ್ಲ. ಏಕೆಂದರೆ ಐಸಿಸಿಯ ನೀತಿ ಸಂಹಿತೆಯ ಅಡಿಯಲ್ಲಿ ಇದನ್ನು ಸಣ್ಣ ತಪ್ಪು ಎಂದು ಪರಿಗಣಿಸುವ ಸಾಧ್ಯತೆಯಿದೆ. ಹೀಗಾಗಿ ಸಿರಾಜ್ಗೆ ದಂಡದ ಶಿಕ್ಷೆ ನೀಡಬಹುದು ಎಂದು ತಿಳಿಸಲಾಗಿದೆ.

ಅದರೆ ಮೊಹಮ್ಮದ್ ಸಿರಾಜ್ ಈ ಪಂದ್ಯದಲ್ಲಿ ಐಸಿಸಿ ನಿಯಮವನ್ನು ಉಲ್ಲಂಘಸಿರುವುದು ಒಮ್ಮೆ ಮಾತ್ರವಲ್ಲ. ಬದಲಾಗಿ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಕೋಪದಿಂದ ಅವರನ್ನು ಗುರಿಯಾಗಿಸಿ ಚೆಂಡೆಸೆದಿದ್ದರು. ಇದಾದ ಬಳಿಕ ಟ್ರಾವಿಸ್ ಹೆಡ್ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಈ ಎರಡು ಘಟನೆಗಳು ಇಲ್ಲಿ ಪರಿಗಣನೆಗೆ ಬರುತ್ತದೆ. ಹಾಗಾಗಿ ಎರಡು ತಪ್ಪುಗಳನ್ನು ಮಾಡಿರುವ ಮೊಹಮ್ಮದ್ ಸಿರಾಜ್ಗೆ ಇದೀಗ ಬ್ಯಾನ್ ಭೀತಿ ಶುರುವಾಗಿದೆ.
