Mohammed Siraj: ಮಿಯಾನ್ ಮ್ಯಾಜಿಕ್: ದಾಖಲೆಗಳ ಮೇಲೆ ದಾಖಲೆ ಬರೆದ ಸಿರಾಜ್
Mohammed Siraj Records: ಪ್ರಥಮ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡದ ಲೆಕ್ಕಾಚಾರಗಳನ್ನು ಮೊಹಮ್ಮದ್ ಸಿರಾಜ್ ತಲೆಕೆಳಗಾಗಿಸಿದ್ದರು. ನಾಲ್ಕನೇ ಓವರ್ನಲ್ಲಿ ಐಡೆನ್ ಮಾರ್ಕ್ರಾಮ್ ಅವರನ್ನು ಔಟ್ ಮಾಡಿ ವಿಕೆಟ್ ಬೇಟೆ ಶುರು ಮಾಡಿದ ಸಿರಾಜ್ ಆ ಬಳಿಕ ಹಿಂತಿರುಗಿ ನೋಡಿಲ್ಲ.
Updated on: Jan 04, 2024 | 6:59 AM

ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಮಿಯಾನ್ ಮ್ಯಾಜಿಕ್ ತೋರಿಸಿದ್ದಾರೆ. ಅದು ಕೂಡ ಮೊದಲ ದಿನದಾಟದ ಮೊದಲ ಸೆಷನ್‌ನಲ್ಲೇ ಎಂಬುದು ವಿಶೇಷ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡವು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು.

ಅದರಂತೆ ಪ್ರಥಮ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡದ ಲೆಕ್ಕಾಚಾರಗಳನ್ನು ಮೊಹಮ್ಮದ್ ಸಿರಾಜ್ ತಲೆಕೆಳಗಾಗಿಸಿದ್ದರು. ನಾಲ್ಕನೇ ಓವರ್ನಲ್ಲಿ ಐಡೆನ್ ಮಾರ್ಕ್ರಾಮ್ ಅವರನ್ನು ಔಟ್ ಮಾಡಿ ವಿಕೆಟ್ ಬೇಟೆ ಶುರು ಮಾಡಿದ ಸಿರಾಜ್ ಆ ಬಳಿಕ ಹಿಂತಿರುಗಿ ನೋಡಿಲ್ಲ.

ಕೇವಲ 9 ಓವರ್ಗಳನ್ನು ಎಸೆದ ಸಿರಾಜ್ 15 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಸಿರಾಜ್ ಅವರ ಈ ಮಾರಕ ದಾಳಿಯ ಪರಿಣಾಮ ಸೌತ್ ಆಫ್ರಿಕಾ ತಂಡವು ಕೇವಲ 55 ರನ್ಗಳಿಗೆ ಆಲೌಟ್ ಆಯಿತು. ಇತ್ತ 6 ವಿಕೆಟ್ ಉರುಳಿಸಿ ಮೊಹಮ್ಮದ್ ಸಿರಾಜ್ ಕೂಡ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡರು. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...

ಟೆಸ್ಟ್ ಪಂದ್ಯದ ಮೊದಲ ಸೆಷನ್‌ನಲ್ಲೇ 6 ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಬೌಲರ್ ಎಂಬ ದಾಖಲೆಯನ್ನು ಮೊಹಮ್ಮದ್ ಸಿರಾಜ್ ತಮ್ಮದಾಗಿಸಿಕೊಂಡಿದ್ದಾರೆ.

ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್ನಲ್ಲಿ ಅತೀ ಕಡಿಮೆ ರನ್ ನೀಡಿ 6 ವಿಕೆಟ್ ಕಬಳಿಸಿದ ದಾಖಲೆ ಕೂಡ ಮೊಹಮ್ಮದ್ ಸಿರಾಜ್ ಪಾಲಾಗಿದೆ.

ಮೊದಲ ದಿನದಾಟದ ಲಂಚ್ ಟೈಮ್ಗೂ ಮುನ್ನ 5 ವಿಕೆಟ್ ಕಬಳಿಸಿದ ಭಾರತದ 2ನೇ ಬೌಲರ್ ಎಂಬ ಹೆಗ್ಗಳಿಕೆಗೂ ಸಿರಾಜ್ ಪಾತ್ರರಾದರು. ಇದಕ್ಕೂ ಮುನ್ನ 1987 ರಲ್ಲಿ ಮಣಿಂದರ್ ಸಿಂಗ್ ಈ ಸಾಧನೆ ಮಾಡಿದ್ದರು.

ಟೆಸ್ಟ್ ಕ್ರಿಕೆಟ್ನ ಮೊದಲ ಸೆಷನ್‌ನಲ್ಲೇ 5+ ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ದಾಖಲೆ ಕೂಡ ಮೊಹಮ್ಮದ್ ಸಿರಾಜ್ ಪಾಲಾಗಿದೆ. ಹಾಗೆಯೇ ಈ ಸಾಧನೆ ಮಾಡಿದ ವಿಶೇಷ ಸಾಧಕರ ಪಟ್ಟಿಗೂ ಸಿರಾಜ್ ಸೇರ್ಪಡೆಯಾಗಿದ್ದಾರೆ.

ಒಟ್ಟಿನಲ್ಲಿ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಮಿಯಾನ್ ಮ್ಯಾಜಿಕ್ ತೋರಿಸುವ ಮೂಲಕ ಮೊಹಮ್ಮದ್ ಸಿರಾಜ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಹೊಸ ವರ್ಷದಲ್ಲಿ ಸಿರಾಜ್ ಭರ್ಜರಿ ಶುಭಾರಂಭ ಮಾಡಿರುವುದು ವಿಶೇಷ.
























