IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni) ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ದಾಖಲೆಗಳಲ್ಲಿ ಕೆಲವು ವಿಶ್ವ ದಾಖಲೆಯಾದರೆ, ಇನ್ನು ಕೆಲವು ಅನಗತ್ಯ ದಾಖಲೆಗಳು. ಇದೀಗ ಈ ಅನಗತ್ಯ ದಾಖಲೆ ಪಟ್ಟಿಗೆ ಮತ್ತೊಂದು ರೆಕಾರ್ಡ್ ಸೇರಿದೆ. ಅದು ಸಹ ನಿಧಾನಗತಿಯ ಬ್ಯಾಟಿಂಗ್ನೊಂದಿಗೆ..!
ಹೌದು, ಐಪಿಎಲ್ 2025 ರಲ್ಲಿ ಒಂದು ಬೌಂಡರಿ ಬಾರಿಸಲು ಅತ್ಯಧಿಕ ಎಸೆತಗಳನ್ನು ತೆಗೆದುಕೊಂಡ ಬ್ಯಾಟರ್ ಎಂಬ ಹೀನಾಯ ದಾಖಲೆಯೊಂದು ಮಹೇಂದ್ರ ಸಿಂಗ್ ಧೋನಿ ಹೆಸರಿಗೆ ಸೇರ್ಪಡೆಯಾಗಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ತನ್ನ ಇನಿಂಗ್ಸ್ನ ಮೊದಲ ಬೌಂಡರಿ ಬಾರಿಸಲು ತಗೆದುಕೊಂಡಿದ್ದು ಬರೋಬ್ಬರಿ 19 ಎಸೆತಗಳನ್ನು ಎಂದರೆ ನಂಬಲೇಬೇಕು.
ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಮಹೇಂದ್ರ ಸಿಂಗ್ ಧೋನಿ 11ನೇ ಓವರ್ನಲ್ಲಿ ಕಣಕ್ಕಿಳಿದಿದ್ದರು. ಇದಾಗ್ಯೂ ಅವರ ಬ್ಯಾಟ್ನಿಂದ ಒಂದು ಬೌಂಡರಿ ಮೂಡಿಬಂದಿದ್ದು 18ನೇ ಓವರ್ನಲ್ಲಿ. ಮುಖೇಶ್ ಕುಮಾರ್ ಎಸೆದ 18ನೇ ಓವರ್ನ 4ನೇ ಎಸೆತದಲ್ಲಿ ಧೋನಿ ಸಿಕ್ಸ್ ಬಾರಿಸಿದ್ದರು.
ಈ ಮೂಲಕ ಐಪಿಎಲ್ 2025 ರಲ್ಲಿ ಒಂದು ಬೌಂಡರಿ (ಸಿಕ್ಸ್/ಫೋರ್) ಬಾರಿಸಲು ಅತ್ಯಧಿಕ ಎಸೆತಗಳನ್ನು ತೆಗೆದುಕೊಂಡ ಬ್ಯಾಟರ್ ಎಂಬ ಹೀನಾಯ ದಾಖಲೆಯೊಂದನ್ನು ಧೋನಿ ತಮ್ಮದಾಗಿಸಿಕೊಂಡರು. ಅಲ್ಲದೆ ಈ ಪಂದ್ಯದಲ್ಲಿ 26 ಎಸೆತಗಳನ್ನು ಎದುರಿಸಿದ ಧೋನಿ 1 ಸಿಕ್ಸ್ ಹಾಗೂ 1 ಫೋರ್ನೊಂದಿಗೆ ಕೇವಲ 30 ರನ್ಗಳಿಸಲಷ್ಟೇ ಶಕ್ತರಾದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕೆಎಲ್ ರಾಹುಲ್ (77) ಅರ್ಧಶತಕ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 183 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 158 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ 25 ರನ್ಗಳಿಂದ ಸಿಎಸ್ಕೆ ಸೋಲೊಪ್ಪಿಕೊಂಡಿದೆ.