KL Rahul: CSK ವಿರುದ್ಧ ಭರ್ಜರಿ ದಾಖಲೆ ಬರೆದ ಕನ್ನಡಿಗ ಕೆಎಲ್ ರಾಹುಲ್
IPL 2025 CSK vs DC: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 17ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 183 ರನ್ ಬಾರಿಸಿದರೆ, ಸಿಎಸ್ಕೆ ತಂಡ 158 ರನ್ಗಳಿಸಲಷ್ಟೇ ಶಕ್ತರಾದರು.
Updated on: Apr 06, 2025 | 10:31 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 17ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಅದು ಸಹ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚೆನ್ನೈನಲ್ಲೇ ಬಗ್ಗು ಬಡಿಯುವ ಮೂಲಕ ಎಂಬುದು ವಿಶೇಷ. ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೆಎಲ್ ರಾಹುಲ್ (KL Rahul) ಉತ್ತಮ ಆರಂಭ ಒದಗಿಸಿದ್ದರು.

ಬ್ಯಾಟಿಂಗ್ಗೆ ಕಷ್ಟಕರವಾಗಿದ್ದ ಈ ಪಿಚ್ನಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಕೆಎಲ್ ರಾಹುಲ್ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ 51 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 77 ರನ್ ಬಾರಿಸಿದರು. ಕೆಎಲ್ ರಾಹುಲ್ನ ಹೊರತುಪಡಿಸಿ ಡೆಲ್ಲಿ ಕ್ಯಾಪಿಟಲ್ಸ್ ಪರ ಯಾವುದೇ ಬ್ಯಾಟರ್ 40 ರನ್ಗಳ ಗಡಿದಾಟಿರಲಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.

ಇನ್ನು ಕೆಎಲ್ ರಾಹುಲ್ ಬಾರಿಸಿದ 77 ರನ್ಗಳ ನೆರವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತು. 184 ರನ್ಗಳ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 158 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ 25 ರನ್ಗಳ ಜಯ ಸಾಧಿಸಿದೆ.

ಈ ಪಂದ್ಯದಲ್ಲಿ 77 ರನ್ ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬೃಹತ್ ಮೊತ್ತ ದಾಖಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಕೆಎಲ್ ರಾಹುಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅತೀ ಹೆಚ್ಚು ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಆಟಗಾರ ಎನಿಸಿಕೊಂಡರು.

ಇದಕ್ಕೂ ಮುನ್ನ ಈ ದಾಖಲೆ ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ ಕೀರನ್ ಪೊಲಾರ್ಡ್ ಹೆಸರಿನಲ್ಲಿತ್ತು. ಪೊಲಾರ್ಡ್ ಸಿಎಸ್ಕೆ ವಿರುದ್ಧ ಒಟ್ಟು 4 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಕೆಎಲ್ ರಾಹುಲ್ ಸರಿಗಟ್ಟಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 15 ಇನಿಂಗ್ಸ್ ಆಡಿರುವ ರಾಹುಲ್ ಇದೀಗ 4ನೇ ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
























