RCB ಪರ ಹೊಸ ಇತಿಹಾಸ ನಿರ್ಮಿಸಿದ ನಾಡಿನ್ ಡಿ ಕ್ಲರ್ಕ್
Nadine de Klerk Record: ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಸೌತ್ ಆಫ್ರಿಕಾ ಆಲ್ರೌಂಡರ್ ನಾಡಿನ್ ಡಿ ಕ್ಲರ್ಕ್ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ಶ್ರೇಯಾಂಕಾ ಪಾಟೀಲ್ ಹೆಸರಿನಲ್ಲಿದ್ದ ದಾಖಲೆ ಮುರಿಯುವ ಮೂಲಕ ಎಂಬುದು ವಿಶೇಷ.
Updated on: Jan 31, 2026 | 8:32 AM

ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಒಂದೇ ಸೀಸನ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ದಾಖಲೆ ನಾಡಿನ್ ಡಿ ಕ್ಲರ್ಕ್ (Nadine de Klerk) ಪಾಲಾಗಿದೆ. ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಸಂಘಟಿಸುವ ಮೂಲಕ ನಾಡಿಕ್ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ 18ನೇ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದಿದ್ದ ನಾಡಿನ್ ಡಿ ಕರ್ಕ್ ಕೇವಲ 22 ರನ್ ಮಾತ್ರ ನೀಡಿದ್ದರು. ಅಷ್ಟೇ ಅಲ್ಲದೆ ಯುಪಿ ವಾರಿಯರ್ಸ್ ತಂಡದ ನಾಲ್ವರು ಬ್ಯಾಟರ್ಗಳನ್ನು ಔಟ್ ಮಾಡಿದ್ದರು.

ಈ ನಾಲ್ಕು ವಿಕೆಟ್ಗಳೊಂದಿಗೆ ನಾಡಿನ್ ಡಿ ಕ್ಲರ್ಕ್ ಈ ಬಾರಿಯ ಸೀಸನ್ನಲ್ಲಿ ಒಟ್ಟು 15 ವಿಕೆಟ್ಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಒಂದೇ ಸೀಸನ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಕನ್ನಡತಿ ಶ್ರೇಯಾಂಕಾ ಪಾಟೀಲ್ ಹೆಸರಿನಲ್ಲಿತ್ತು. 2024 ರಲ್ಲಿ ಶ್ರೇಯಾಂಕಾ 8 ಪಂದ್ಯಗಳ ಮೂಲಕ 13 ವಿಕೆಟ್ ಕಬಳಿಸಿದ್ದರು. ಈ ಹದಿಮೂರು ವಿಕೆಟ್ಗಳೊಂದಿಗೆ ಆರ್ಸಿಬಿ ಪರ ಸೀಸನ್ವೊಂದರಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ದಾಖಲೆ ನಿರ್ಮಿಸಿದ್ದರು.

ಇದೀಗ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಸೌತ್ ಆಫ್ರಿಕಾ ಆಟಗಾರ್ತಿ ಯಶಸ್ವಿಯಾಗಿದ್ದಾರೆ. ಈ ಬಾರಿ ಆರ್ಸಿಬಿ ಪರ 8 ಪಂದ್ಯಗಳನ್ನಾಡಿರುವ ನಾಡಿನ್ ಡಿ ಕ್ಲರ್ಕ್ ಒಟ್ಟು 15 ವಿಕೆಟ್ ಕಬಳಿಸುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ.
