ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಮುಕ್ತಾಯದ ಬೆನ್ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023-25ರ ನೂತನ ಅಂಕ ಪಟ್ಟಿ ಪ್ರಕಟಗೊಂಡಿದೆ. ಈ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸುವ ಮೂಲಕ ಪಾಕಿಸ್ತಾನ್ ತಂಡವು ಭಾರೀ ಮುಖಭಂಗಕ್ಕೆ ಒಳಗಾಗಿದೆ.
ಅಂದರೆ ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಪಾಕಿಸ್ತಾನ್ ತಂಡವು ಕೊನೆಯ ಸ್ಥಾನ ಪಡೆದುಕೊಂಡಿದೆ. WTC ಸರಣಿಯಲ್ಲಿ ಆಡಿದ 14 ಪಂದ್ಯಗಳಲ್ಲಿ ಪಾಕ್ ಪಡೆ ಗೆದ್ದಿರುವುದು ಕೇವಲ 5 ಮ್ಯಾಚ್ಗಳಲ್ಲಿ ಮಾತ್ರ. ಅಲ್ಲದೆ 9 ಪಂದ್ಯಗಳಲ್ಲಿ ಸೋಲನುಭವಿಸಿದೆ.
ಈ 9 ಪಂದ್ಯಗಳಲ್ಲಿನ ಸೋಲಿನೊಂದಿಗೆ ಪಾಕಿಸ್ತಾನ್ ತಂಡವು WTC ಪಾಯಿಂಟ್ಸ್ ಟೇಬಲ್ನಲ್ಲಿ ಕೇವಲ 27.98 ಶೇಕಡಾವಾರು ಅಂಕಗಳನ್ನು ಪಡೆದುಕೊಂಡಿದೆ. ಈ ಮೂಲಕ 2023-25ರ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ತಂಡ ಎನಿಸಿಕೊಂಡಿದೆ.
ಇನ್ನು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023-25ರ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಸೌತ್ ಆಫ್ರಿಕಾ ತಂಡ. ಆಫ್ರಿಕನ್ ಪಡೆ ಆಡಿದ 12 ಪಂದ್ಯಗಳಲ್ಲಿ 8 ಗೆಲುವು ದಾಖಲಿಸಿದೆ. ಅಲ್ಲದೆ ಒಂದು ಮ್ಯಾಚ್ ಅನ್ನು ಡ್ರಾ ಮಾಡಿಕೊಳ್ಳುವ ಮೂಲಕ ಒಟ್ಟು 69.44% ಅಂಕಗಳನ್ನು ಪಡೆದು ಅಗ್ರಸ್ಥಾನ ಅಲಂಕರಿಸಿದೆ. ಈ ಅಗ್ರಸ್ಥಾನದೊಂದಿಗೆ ಸೌತ್ ಆಫ್ರಿಕಾ WTC ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ.
ಹಾಗೆಯೇ ದ್ವಿತೀಯ ಸ್ಥಾನದಲ್ಲಿರುವುದು ಆಸ್ಟ್ರೇಲಿಯಾ. ಆಸೀಸ್ ಪಡೆ ಈ ಬಾರಿಯ WTC ಸರಣಿಯಲ್ಲಿ ಒಟ್ಟು 17 ಪಂದ್ಯಗಳನ್ನಾಡಿದ್ದು, ಈ ವೇಳೆ 11 ಜಯ ಹಾಗೂ 2 ಡ್ರಾನೊಂದಿಗೆ 63.73% ಅಂಕಗಳನ್ನು ಪಡೆದುಕೊಂಡಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆಗಿಟ್ಟಿಸಿಕೊಂಡಿದೆ.
ಇನ್ನು ಭಾರತ ತಂಡವು ಈ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಟೀಮ್ ಇಂಡಿಯಾ ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಒಟ್ಟು 19 ಪಂದ್ಯಗಳನ್ನಾಡಿದ್ದು, ಈ ವೇಳೆ 9 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಇನ್ನು 2 ಪಂದ್ಯಗಳಲ್ಲಿ ಡ್ರಾ ಸಾಧಿಸಿದರೆ, 8 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ. ಈ ಮೂಲಕ 50.00% ಅಂಕಗಳನ್ನು ಪಡೆದು ಫೈನಲ್ಗೇರುವಲ್ಲಿ ವಿಫಲವಾಗಿದೆ.
Published On - 12:53 pm, Mon, 27 January 25