
ಇಂಗ್ಲೆಂಡ್ನಲ್ಲಿ 100 ಎಸೆತಗಳ ಕ್ರಿಕೆಟ್ ಟೂರ್ನಿ ‘ದಿ ಹಂಡ್ರೆಡ್’ ಲೀಗ್ ಶುರುವಾಗಿದೆ. ಈ ಟೂರ್ನಿಯ ಮೊದಲ ಪಂದ್ಯದಲ್ಲೇ ಪಾಕಿಸ್ತಾನ್ ಆಟಗಾರ ಕಣಕ್ಕಿಳಿದಿದ್ದಾರೆ. ಅದು ಸಹ ಭಾರತೀಯ ಮೂಲದ ಫ್ರಾಂಚೈಸಿ ಸನ್‌ರೈಸರ್ಸ್ ಲೀಡ್ಸ್ ತಂಡದ ಪರ ಎಂಬುದು ವಿಶೇಷ. (PC: SL)

ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯ ಮಾರನ್ ಅವರು 2025 ರಲ್ಲಿ ದಿ ಹಂಡ್ರೆಡ್ ಲೀಗ್ನಲ್ಲಿ ಸನ್‌ರೈಸರ್ಸ್ ಲೀಡ್ಸ್ ಹೆಸರಿನ ತಂಡವನ್ನು ಖರೀದಿಸಿದ್ದರು. ಅಲ್ಲದೆ ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಕಾವ್ಯಾ ಮಾರನ್ ಹಾಗೂ ಕೋಚ್ ಡೇನಿಯಲ್ ವೆಟ್ಟೋರಿ ಭಾರಿ ಪೈಪೋಟಿ ನಡೆಸಿ ಪಾಕಿಸ್ತಾನ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು 1,90,000 ಪೌಂಡ್ಸ್ (ಸುಮಾರು ₹2.45 ಕೋಟಿ) ನೀಡಿ ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದರು. (PC: PCB)

ಕಾವ್ಯ ಮಾರನ್ ಅವರ ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಪಾಕಿಸ್ತಾನ್ ಆಟಗಾರನನ್ನು ಸನ್‌ರೈಸರ್ಸ್ ಲೀಡ್ಸ್ ತಂಡದಿಂದ ಕೈ ಬಿಡಬೇಕೆಂಬ ಒತ್ತಾಯಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬಂದಿತ್ತು. ಹೀಗಾಗಿ ಟೂರ್ನಿ ಆರಂಭಕ್ಕೂ ಮುನ್ನ ಅಬ್ರಾರ್ ಅಹ್ಮದ್ ಅವರನ್ನು SRH ಫ್ರಾಂಚೈಸಿ ಕೈ ಬಿಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. (PC: X.com)

ಅದರೆ ಎಂಐ ಲಂಡನ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಸನ್‌ರೈಸರ್ಸ್ ಲೀಡ್ಸ್ ಪರ ಅಬ್ರಾರ್ ಅಹ್ಮದ್ ಕಣಕ್ಕಿಳಿದಿದ್ದಾರೆ. ಇದರೊಂದಿಗೆ ‘ಸನ್‌ರೈಸರ್ಸ್’ ಲೋಗೋ ಮತ್ತು ಜೆರ್ಸಿ ಧರಿಸಿ ಕಣಕ್ಕಿಳಿದ ಮೊದಲ ಪಾಕಿಸ್ತಾನಿ ಆಟಗಾರ ಎಂಬ ಹೆಗ್ಗಳಿಕೆಗೆ ಅಬ್ರಾರ್ ಪಾತ್ರರಾಗಿದ್ದಾರೆ. (PC: PCB)

ಇನ್ನು ಈ ಪಂದ್ಯದಲ್ಲಿ 3 ಎಸೆತಗಳನ್ನು ಎದುರಿಸಿದ ಅಬ್ರಾರ್ ಅಹ್ಮದ್ ಒಂದು ಸಿಕ್ಸರ್ನೊಂದಿಗೆ 7 ರನ್ ಬಾರಿಸಿದ್ದರು. ಹಾಗೆಯೇ 10 ಎಸೆತಗಳಲ್ಲಿ ಬರೋಬ್ಬರಿ 30 ರನ್ ನೀಡಿದ್ದಾರೆ. ಇತ್ತ ಮೊದಲ ಮ್ಯಾಚ್ನಲ್ಲೇ ದುಬಾರಿಯಾಗಿರುವ ಕಾರಣ ಪಾಕ್ ಸ್ಪಿನ್ನರ್ನನ್ನು ಮುಂದಿನ ಪಂದ್ಯದಿಂದ ಕೈ ಬಿಡುವ ಸಾಧ್ಯತೆಯಿದೆ. (PC: The Hundred)