Rassie van der Dussen: 6 ಭರ್ಜರಿ ಸಿಕ್ಸ್, 7 ಫೋರ್: ಸ್ಪೋಟಕ ಸೆಂಚುರಿ ಸಿಡಿಸಿದ ಡಸ್ಸೆನ್
PSL 2024: ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಸೌತ್ ಆಫ್ರಿಕಾ ಕ್ರಿಕೆಟಿಗ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಪೇಶಾವರ್ ಝಲ್ಮಿ ವಿರುದ್ಧದ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ಪರ ಕಣಕ್ಕಿಳಿದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಸ್ಪೋಟಕ ಇನಿಂಗ್ಸ್ ಆಡಿದರು. ಈ ಮೂಲಕ ಶತಕ ಬಾರಿಸಿದರೂ ತಂಡಕ್ಕೆ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.
Updated on: Feb 26, 2024 | 9:37 AM

ಪಾಕಿಸ್ತಾನ್ ಸೂಪರ್ ಲೀಗ್ನ (PSL 2024) 12ನೇ ಪಂದ್ಯದಲ್ಲಿ ಸ್ಪೋಟಕ ಶತಕ ಬಾರಿಸಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (Rassie van der Dussen) ಅಬ್ಬರಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಾಹೋರ್ ಖಲಂದರ್ಸ್ ತಂಡವು ಪೇಶಾವರ್ ಝಲ್ಮಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು.

ಅದರಂತೆ ಇನಿಂಗ್ಸ್ ಆರಂಭಿಸಿದ ಪೇಶಾವರ್ ಝಲ್ಮಿ ತಂಡಕ್ಕೆ ಯುವ ಎಡಗೈ ದಾಂಡಿಗ ಸೈಮ್ ಅಯ್ಯೂಬ್ (88) ಹಾಗೂ ಬಾಬರ್ ಆಝಂ (48) ಭರ್ಜರಿ ಆರಂಭ ಒದಗಿಸಿದ್ದರು. ಇದಾದ ಬಳಿಕ ರೋವ್ಮನ್ ಪೊವೆಲ್ 20 ಎಸೆತಗಳಲ್ಲಿ 46 ರನ್ ಸಿಡಿಸಿದರು. ಈ ಮೂಲಕ ಪೇಶಾವರ್ ಝಲ್ಮಿ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 211 ರನ್ ಕಲೆಹಾಕಿತು.

212 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಲಾಹೋರ್ ಖಲಂದರ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ಫಖರ್ ಝಮಾನ್ (4) ಹಾಗೂ ಫರ್ಹಾನ್ (15) ಬೇಗನೆ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಪೇಶಾವರ್ ಝಲ್ಮಿ ಬೌಲರ್ಗಳ ಬೆಂಡೆತ್ತಿದರು. ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದ ಡಸ್ಸೆನ್ ಕೇವಲ 50 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಬ್ಯಾಟ್ ಮಲೆಕ್ಕೆತ್ತಿದರು.

ಈ ಸ್ಪೋಟಕ ಸೆಂಚುರಿಯ ಹೊರತಾಗಿಯೂ ಲಾಹೋರ್ ಖಲಂದರ್ಸ್ಗೆ ಗೆಲ್ಲಲು ಕೊನೆಯ ಓವರ್ನಲ್ಲಿ 18 ರನ್ಗಳ ಅವಶ್ಯಕತೆಯಿತ್ತು. ಆದರೆ ಅಂತಿಮ ಓವರ್ನಲ್ಲಿ 9 ರನ್ ಕಲೆಹಾಕುವುದರೊಂದಿಗೆ 8 ರನ್ಗಳಿಂದ ಸೋಲೊಪ್ಪಿಕೊಂಡಿತು. ಲಾಹೋರ್ ಖಲಂದರ್ಸ್ ಪರ ಏಕಾಂಗಿ ಹೋರಾಟ ನಡೆಸಿದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 52 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 104 ರನ್ ಬಾರಿಸಿ ಅಜೇಯರಾಗಿ ಉಳಿದರು.



















