- Kannada News Photo gallery Cricket photos Ravi Ashwin pulls out of the 3rd Test due to a family emergency
Ashwin: ಟೀಮ್ ಇಂಡಿಯಾಗೆ ಬಿಗ್ ಶಾಕ್: 3ನೇ ಟೆಸ್ಟ್ನಿಂದ ಹಿಂದೆ ಸರಿದ ಅಶ್ವಿನ್
India vs England 3rd Test: ರಾಜ್ಕೋಟ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಿಂದ ರವಿಚಂದ್ರನ್ ಅಶ್ವಿನ್ (Ashwin) ಹೊರಗುಳಿದಿದ್ದಾರೆ. ವೈಯುಕ್ತಿಕ ಕಾರಣಗಳಿಂದಾಗಿ ಅವರು ದಿಢೀರ್ ಚೆನ್ನೈಗೆ ಮರಳಿದ್ದು, ಹೀಗಾಗಿ ಮುಂದಿನ ಮೂರು ದಿನದಾಟಗಳಿಗೆ ಅವರು ಅಲಭ್ಯರಾಗಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
Updated on:Feb 17, 2024 | 7:13 AM

ಟೀಮ್ ಇಂಡಿಯಾದ ಹಿರಿದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ವಿರುದ್ದದ ಮೂರನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ರಾಜ್ಕೋಟ್ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ 2ನೇ ದಿನದಾಟದಲ್ಲಿ ಕಾಣಿಸಿಕೊಂಡಿದ್ದ ಅಶ್ವಿನ್ ದಿಢೀರ್ ಮನೆಗೆ ವಾಪಾಸ್ಸಾಗಿದ್ದಾರೆ. ವೈಯುಕ್ತಿಕ ಕಾರಣಗಳಿಂದಾಗಿ ಅವರು ಭಾರತ ತಂಡವನ್ನು ತೊರೆದಿದ್ದು, ಹೀಗಾಗಿ ಮೂರನೇ ಟೆಸ್ಟ್ ಪಂದ್ಯದ ಉಳಿದ ದಿನದಾಟಗಳಿಗೆ ಅಲಭ್ಯರಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಶುಕ್ರವಾರ ನಡೆದ 2ನೇ ದಿನದಾಟದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದ್ದ ಅಶ್ವಿನ್ 37 ರನ್ಗಳಿಸಿ ಮಿಂಚಿದ್ದರು. ಹಾಗೆಯೇ ಬೌಲಿಂಗ್ನಲ್ಲಿ ಇಂಗ್ಲೆಂಡ್ ಆರಂಭಿಕ ಆಟಗಾರ ಝಾಕ್ ಕ್ರಾಲಿ (15) ವಿಕೆಟ್ ಕಬಳಿಸಿ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟಿದ್ದರು.

ಆದರೆ 2ನೇ ದಿನದಾಟದ ಮುಕ್ತಾಯದ ಬೆನ್ನಲ್ಲೇ ಅಶ್ವಿನ್ ಟೀಮ್ ಇಂಡಿಯಾವನ್ನು ತೊರೆದಿದ್ದಾರೆ. ಕುಟುಂಬದ ತುರ್ತುಪರಿಸ್ಥಿತಿಯಿಂದಾಗಿ ಅವರು ತಂಡವನ್ನು ತೊರೆಯುವ ನಿರ್ಧಾರ ಮಾಡಿದ್ದಾರೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಅಶ್ವಿನ್ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಹೀಗಾಗಿ ಅವರು ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಶೀಘ್ರದಲ್ಲೇ ಅವರ ತಾಯಿ ಗುಣಮುಖರಾಗಲಿ ಎಂದು ಹಾರೈಸುತ್ತೇನೆಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.

ಇದೀಗ ಭಾರತ ಮತ್ತು ಇಂಗ್ಲೆಂಡ್ ನಡುವಣ ನಡುವಣ ಮೂರನೇ ಪಂದ್ಯವು ಮೂರನೇ ದಿನದಾಟಕ್ಕೆ ಕಾಲಿಟ್ಟಿದೆ. ಆದರೆ ಅಶ್ವಿನ್ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾ ಪಾಲಿಗೆ ಹಿನ್ನಡೆಯನ್ನುಂಟು ಮಾಡುವುದರಲ್ಲಿ ಅನುಮಾನವೇ ಇಲ್ಲ.

ಏಕೆಂದರೆ ಈ ಪಂದ್ಯದಲ್ಲಿ ಭಾರತ ತಂಡವು ಮೂವರು ಸ್ಪಿನ್ನರ್ಗಳನ್ನು ಕಣಕ್ಕಿಳಿಸಿತ್ತು. ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ಹಾಗೂ ಅಶ್ವಿನ್ ಕಣಕ್ಕಿಳಿದಿದ್ದರು. ಇದೀಗ ತಂಡದ ಪ್ರಮುಖ ಸ್ಪಿನ್ನರ್ ಉಳಿದ ದಿನದಾಟಗಳಿಂದ ಹೊರಗುಳಿದಿದ್ದಾರೆ. ಹೀಗಾಗಿ ಭಾರತದ ಪಾಲಿಗೆ ಓರ್ವ ಬೌಲರ್ ಕಡಿಮೆಯಾಗಲಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಝಾಕ್ ಕ್ರಾಲಿ ವಿಕೆಟ್ ಕಬಳಿಸುವ ಮೂಲಕ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ಗಳ ಸಾಧನೆ ಮಾಡಿದ್ದರು. ಅನಿಲ್ ಕುಂಬ್ಳೆ ಬಳಿಕ ಈ ಸಾಧನೆ ಬರೆದ ಭಾರತದ 2ನೇ ಬೌಲರ್ ಎಂಬ ಹೆಗ್ಗಳಿಕೆಗೂ ರವಿಚಂದ್ರನ್ ಅಶ್ವಿನ್ ಪಾತ್ರರಾಗಿದ್ದರು. ಆದರೆ ಈ ಸಾಧನೆಯ ಸಂಭ್ರಮದಲ್ಲಿದ್ದ ಅಶ್ವಿನ್ ಕೆಲವೇ ಕ್ಷಣಗಳಲ್ಲಿ ಟೀಮ್ ಇಂಡಿಯಾವನ್ನು ತೊರೆಯಬೇಕಾಗಿ ಬಂದಿದೆ.

ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಝ್ ಖಾನ್, ಧ್ರುವ್ ಜುರೇಲ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್ (ಅಲಭ್ಯ).
Published On - 6:47 am, Sat, 17 February 24
