IPL 2026: ಒಂದೇ ಸ್ಟೇಡಿಯಂ ಮೇಲೆ RCB ಮತ್ತು RR ಕಣ್ಣು..!
IPL 2026: 2025, ಜೂನ್ 4 ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಆರ್ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು. ಈ ಕಾಲ್ತುಳಿತ ದುರಂತ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ಈ ತನಿಖೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಲೋಪದೋಷಗಳು ಬಹಿರಂಗವಾಗಿದ್ದವು. ಅಲ್ಲದೆ ಕ್ರೀಡಾಂಗಣದ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಈ ದುರಂತದ ಬಳಿಕ ಬಿಸಿಸಿಐ ಬೆಂಗಳೂರಿನಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.
Updated on: Jan 07, 2026 | 7:54 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರ ಆರಂಭಕ್ಕೆ ಸಿದ್ಧತೆಗಳು ಶುರುವಾಗಿದೆ. ಈ ಸಿದ್ಧತೆಗಳ ನಡುವೆಯೇ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗಳು ಪುಣೆಯತ್ತ ಮುಖ ಮಾಡಿದ್ದಾರೆ. ಅದು ಸಹ ತವರು ಮೈದಾನಕ್ಕಾಗಿ ಎಂಬುದು ವಿಶೇಷ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಣಕ್ಕಿಳಿಯುವುದು ಇನ್ನೂ ಸಹ ಖಚಿತವಾಗಿಲ್ಲ. 2025ರ ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಆರ್ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು. ಈ ದುರಂತದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಗಳ ಆಯೋಜನೆಯನ್ನು ನಿಷೇಧಿಸಲಾಗಿದೆ.

ಚಿನ್ನಸ್ವಾಮಿ ಸ್ಟೇಡಿಯಂ ಮೇಲಿನ ನಿಷೇಧ ಇನ್ನೂ ಸಹ ತೆರವಾಗದ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬದಲಿ ತವರು ಮೈದಾನದತ್ತ ಮುಖ ಮಾಡಿದೆ. ಅದರಂತೆ ಇದೀಗ ಆರ್ಸಿಬಿ ಅಧಿಕಾರಿಗಳು ಪುಣೆಯ ಎಂಸಿಎ ಸ್ಟೇಡಿಯಂ ಅನ್ನು ಪರಿಶೀಲಿಸಿದ್ದಾರೆ ಎಂದು ಮಹಾರಾಷ್ಟ್ರ ಕ್ರಿಕೆಟ್ ಮಂಡಳಿಯು ತಿಳಿಸಿದೆ.

ಮತ್ತೊಂದೆಡೆ, ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಪದೇ ಪದೇ ಎಚ್ಚರಿಕೆ ನೀಡಿದ್ದರೂ ರಾಜಸ್ಥಾನ ಕ್ರಿಕೆಟ್ ಸಂಘವು ಇನ್ನೂ ಸಹ ಚುನಾವಣೆಯನ್ನು ನಡೆಸಿಲ್ಲ. ಹೀಗಾಗಿ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸುವುದನ್ನು ಬಿಸಿಸಿಐ ನಿಷೇಧಿಸಿದೆ.

ಇತ್ತ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ರಾಜಸ್ಥಾನ್ ರಾಯಲ್ಸ್ ತಂಡದ ತವರು ಮೈದಾನ. ಇದೀಗ ಈ ಸ್ಟೇಡಿಯಂ ಅನ್ನು ನಿಷೇಧಕ್ಕೊಳಪಡಿಸಿರುವುದರಿಂದ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಪರ್ಯಾಯ ಸ್ಟೇಡಿಯಂನ ಹುಡುಕಾಟದಲ್ಲಿದೆ. ಇದಕ್ಕಾಗಿ ಪುಣೆಯ ಎಂಸಿಎ ಸ್ಟೇಡಿಯಂ ಭೇಟಿ ನೀಡಿ ಆರ್ಆರ್ ಅಧಿಕಾರಿಗಳು ಪರಿಶೀಲಿಸಿದ್ದಾರೆ.

ಅಂದರೆ ಎರಡು ಸ್ಟೇಡಿಯಂಗಳು ನಿಷೇಧಕ್ಕೊಳಗಾಗಿರುವುದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ಪರ್ಯಾಯ ಸ್ಟೇಡಿಯಂಗಳ ಹುಡುಕಾಟದಲ್ಲಿದ್ದಾರೆ. ಇದೀಗ ಈ ಎರಡು ಫ್ರಾಂಚೈಸಿಗಳು ಪುಣೆಯ ಸ್ಟೇಡಿಯಂನತ್ತ ಮುಖ ಮಾಡಿದ್ದು, ಈ ಎರಡು ಟೀಮ್ಗಳಲ್ಲಿ ಯಾರಿಗೆ ಎಂಸಿಎ ಸ್ಟೇಡಿಯಂ ಸಿಗಲಿದೆ ಕಾದು ನೋಡಬೇಕಿದೆ.
