- Kannada News Photo gallery Cricket photos Rishabh Pant Injured During Nets Practice Ahead of Brisbane Test
IND vs AUS: ಅಭ್ಯಾಸದ ವೇಳೆ ಗಾಯಗೊಂಡ ಗಾಬಾ ಹೀರೋ ರಿಷಬ್ ಪಂತ್
Rishabh Pant injury: ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನೆಟ್ಸ್ ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ. ಥ್ರೋಡೌನ್ ಸ್ಪೆಷಲಿಸ್ಟ್ ರಘು ಅವರು ಎಸೆದ ಚೆಂಡು ಪಂತ್ ಅವರ ಹೆಲ್ಮೆಟ್‌ಗೆ ಬಡಿದಿದೆ. ಆದರೆ ಗಾಯ ಗಂಭೀರವಾಗಿಲ್ಲ ಎಂದು ವರದಿಯಾಗಿದೆ. ಸ್ವಲ್ಪ ವಿರಾಮದ ನಂತರ ಪಂತ್ ಮತ್ತೆ ಅಭ್ಯಾಸ ಆರಂಭಿಸಿದ್ದಾರೆ.
Updated on: Dec 10, 2024 | 3:55 PM

ಅಡಿಲೇಡ್ ಟೆಸ್ಟ್‌ನಲ್ಲಿ 10 ವಿಕೆಟ್‌ಗಳ ಸೋಲನ್ನು ಎದುರಿಸಿದ ಟೀಂ ಇಂಡಿಯಾ ಪ್ರಸ್ತುತ ಬ್ರಿಸ್ಬೇನ್ ಟೆಸ್ಟ್‌ಗೆ ತಯಾರಿ ನಡೆಸುತ್ತಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್‌ಗೆ ಟೀಂ ಇಂಡಿಯಾದ ಎಲ್ಲಾ ಆಟಗಾರರು ತಯಾರಿ ನಡೆಸುತ್ತಿದ್ದಾರೆ. ಈ ಅವಧಿಯಲ್ಲಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಕೂಡ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದರು.

ಆದರೆ, ಥ್ರೋಡೌನ್ ಸ್ಪೆಷಲಿಸ್ಟ್ ರಘು ಅವರು ಎಸೆದ ಎಸೆತ ರಿಷಬ್ ಪಂತ್ ಗಾಯಗೊಳ್ಳುವಂತೆ ಮಾಡಿದೆ. ಬ್ರಿಸ್ಬೇನ್‌ನ ಗಾಬಾದಲ್ಲಿ ನಡೆಯಲಿರುವ ಟೆಸ್ಟ್‌ಗೆ ತಯಾರಿ ನಡೆಸುತ್ತಿದ್ದಾಗ ಪಂತ್ ಗಾಯಗೊಂಡಿದ್ದಾರೆ. ಆದರೆ ಅದೃಷ್ಟವಶಾತ್ ಪಂತ್ ಅವರ ಗಾಯ ಅಷ್ಟು ಗಂಭೀರವಾಗಿಲ್ಲ. ಹೀಗಾಗಿ ಸ್ವಲ್ಪ ಸಮಯ ವಿರಾಮ ತೆಗೆದುಕೊಂಡಿದ್ದ ಪಂತ್, ಆ ಬಳಿಕ ಮತ್ತೆ ಬ್ಯಾಟಿಂಗ್ ಅಭ್ಯಾಸ ಮಾಡಿದ್ದಾರೆ.

ಥ್ರೋಡೌನ್ ಸ್ಪೆಷಲಿಸ್ಟ್ ರಘು ಅವರು ರಿಷಬ್ ಪಂತ್‌ಗೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದರು. ರಘು ಅವರು ಸೈಡ್ ಆರ್ಮ್ ಬೌಲಿಂಗ್ ಮಾಡುವ ಮೂಲಕ ಅಭ್ಯಾಸದಲ್ಲಿ ಪಂತ್‌ಗೆ ಸಹಾಯ ಮಾಡುತ್ತಿದ್ದರು. ಈ ವೇಳೆ ರಘು ಎಸೆದ ಚೆಂಡು ನೇರವಾಗಿ ಪಂತ್ ಅವರ ಹೆಲ್ಮೆಟ್‌ಗೆ ಬಡಿಯಿತು. ಹೀಗಾಗಿ ಪಂತ್ ಗಾಯಗೊಂಡರು. ರಿಷಬ್ ಪಂತ್ ಗಾಯಗೊಂಡ ನಂತರ ಬ್ಯಾಟಿಂಗ್ ಅಭ್ಯಾಸವನ್ನು ನಿಲ್ಲಿಸಿದರು.

ಕೂಡಲೇ ವೈದ್ಯಕೀಯ ಸಿಬ್ಬಂದಿ, ಭಾರತದ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಮತ್ತು ಸಹಾಯಕ ಕೋಚ್ ರಿಯಾನ್ ಟೆನ್ ಡೋಸ್ಚೇಟ್ ಪಂತ್ ಬಳಿಗೆ ಬಂದು ಅವರನ್ನು ಪರಿಶೀಲಿಸಿದರು. ಸ್ವಲ್ಪ ಸಮಯ ವಿಶ್ರಾಂತಿ ಪಡೆದುಕೊಂಡ ಪಂತ್, ಮತ್ತೆ ಬ್ಯಾಟಿಂಗ್ ಅಭ್ಯಾಸ ಶುರು ಮಾಡಿದ್ದಾರೆ.

ಉಭಯ ತಂಡಗಳ ನಡುವಿನ ಮೂರನೇ ಟೆಸ್ಟ್ ಡಿಸೆಂಬರ್ 14 ರಿಂದ ಬ್ರಿಸ್ಬೇನ್‌ನ ಗಾಬಾದಲ್ಲಿ ಆರಂಭವಾಗಲಿದೆ. 2021ರಲ್ಲಿ ಇದೇ ಮೈದಾನದಲ್ಲಿ ನಡೆದ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಆಗ ರಿಷಬ್ ಪಂತ್ ಟೀಂ ಇಂಡಿಯಾದ ಗೆಲುವಿನ ಹೀರೋ ಆಗಿ ಹೊರಹೊಮ್ಮಿದ್ದರು.

ಈ ಪಂದ್ಯದಲ್ಲಿ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 369 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 294 ರನ್ ಗಳಿಸಿತ್ತು. ಇತ್ತ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 336 ರನ್ ಗಳಿಸಿತ್ತು. ಪಂದ್ಯ ಗೆಲ್ಲಲು ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 328 ರನ್‌ಗಳ ಗುರಿ ಬೆನ್ನಟ್ಟಬೇಕಿತ್ತು. ಆ ವೇಳೆ ತಂಡದ ಪರ ಗೆಲುವಿನ ಇನ್ನಿಂಗ್ಸ್ ಆಡಿದ್ದ ಪಂತ್ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 89 ರನ್ ಗಳಿಸುವ ಮೂಲಕ ಕಾಂಗರೂ ತಂಡದಿಂದ ಪಂದ್ಯವನ್ನು ಕಸಿದುಕೊಂಡಿದ್ದರು.

ಪ್ರಸಕ್ತ ಸರಣಿಯಲ್ಲಿ ರಿಷಬ್ ಪಂತ್ ತಮ್ಮ ಬ್ಯಾಟ್‌ನಿಂದ ಯಾವುದೇ ಮ್ಯಾಜಿಕ್ ಪ್ರದರ್ಶಿಸಲು ಸಾಧ್ಯವಾಗಿಲ್ಲ. ಪರ್ತ್ ಟೆಸ್ಟ್‌ನಲ್ಲಿ ಅವರ ಬ್ಯಾಟ್ ಮೌನವಾಗಿತ್ತು. ಅಡಿಲೇಡ್ ಟೆಸ್ಟ್‌ನಲ್ಲೂ ಕೂಡ ಅವರ ಬ್ಯಾಟ್‌ನಿಂದ ಯಾವುದೇ ರನ್ ಬರಲಿಲ್ಲ. ಹೀಗಾಗಿ ಅವರ ನೆಚ್ಚಿನ ಗಾಬಾ ಮೈದಾನದಲ್ಲಾದರೂ ರನ್ ಮಳೆ ಸುರಿಯಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.



















