- Kannada News Photo gallery Cricket photos Rishabh Pant vs Adam Gilchrist - Performance comparison after 34 Tests
Rishabh Pant: ಗಿಲ್ಕ್ರಿಸ್ಟ್ ಹಾದಿಯಲ್ಲಿ ರಿಷಭ್ ಪಂತ್
Rishabh Pant: ಚೆನ್ನೈನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್ಗೆ ಮರಳಿದ್ದಾರೆ. ಇದರೊಂದಿಗೆ ಭಾರತದ ಪರ ಅತ್ಯಧಿಕ ಟೆಸ್ಟ್ ಶತಕ ಸಿಡಿಸಿದ ವಿಕೆಟ್ ಕೀಪರ್ಗಳ ಪಟ್ಟಿಯಲ್ಲಿ ಧೋನಿಯ ದಾಖಲೆಯನ್ನು ಸರಿಗಟ್ಟಿದ್ದಾರೆ.
Updated on: Sep 22, 2024 | 11:08 AM

ಆ್ಯಡಂ ಗಿಲ್ಕ್ರಿಸ್ಟ್... ಆಸ್ಟ್ರೇಲಿಯಾ ಕ್ರಿಕೆಟ್ ಕಂಡಂತಹ ಸರ್ವಶ್ರೇಷ್ಠ ವಿಕೆಟ್ ಕೀಪರ್ ಬ್ಯಾಟರ್. ಫಾರ್ಮಾಟ್ ಯಾವುದೇ ಇರಲಿ, ಗಿಲ್ಕ್ರಿಸ್ಟ್ ಅಬ್ಬರ ಮಾತ್ರ ಒಂದೇ ರೀತಿಯಲ್ಲಿರುತ್ತಿತ್ತು. ಹೀಗಾಗಿಯೇ ಗಿಲ್ಲಿ ತಮ್ಮ ಕೆರಿಯರ್ನ ಉದ್ದಕ್ಕೂ ಬೌಲರ್ಗಳ ಪಾಲಿಗೆ ಗಿಲ್ಲಿ ಸಿಂಹಸ್ವಪ್ನವಾಗಿದ್ದರು. ಇದೀಗ ಆ್ಯಡಂ ಗಿಲ್ಕ್ರಿಸ್ಟ್ ಹಾದಿಯಲ್ಲೇ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್ ಸಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು.

ಈವರೆಗೆ 34 ಟೆಸ್ಟ್ ಪಂದ್ಯಗಳನ್ನಾಡಿರುವ ರಿಷಭ್ ಪಂತ್ 6 ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಅತೀ ಕಡಿಮೆ ಇನಿಂಗ್ಸ್ಗಳಲ್ಲಿ 6 ಶತಕ ಬಾರಿಸಿದ ವಿಕೆಟ್ ಕೀಪರ್ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಈ 34 ಟೆಸ್ಟ್ ಪಂದ್ಯಗಳಿಂದ 2,419 ರನ್ ಕಲೆಹಾಕಿದ್ದಾರೆ. ಅತ್ತ ಮೊದಲ 34 ಟೆಸ್ಟ್ ಪಂದ್ಯಗಳ ವೇಳೆ ಗಿಲ್ಕ್ರಿಸ್ಟ್ ಕೂಡ ಇದೇ ಮಾದರಿಯಲ್ಲಿ ಬ್ಯಾಟಿಂಗ್ ಪ್ರದರ್ಶಿಸಿದ್ದರು ಎಂಬುದು ವಿಶೇಷ.

ಆ್ಯಡಂ ಗಿಲ್ಕ್ರಿಸ್ಟ್ 34 ಟೆಸ್ಟ್ ಪಂದ್ಯಗಳ ಮುಕ್ತಾಯದ ವೇಳೆಗೆ ಒಟ್ಟು 48 ಇನಿಂಗ್ಸ್ ಆಡಿದ್ದರು. ಈ ವೇಳೆ 80.40ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದ ಅವರು 2,282 ರನ್ ಕಲೆಹಾಕಿದ್ದರು. ಇದೇ ವೇಳೆ 6 ಶತಕ ಹಾಗೂ 12 ಅರ್ಧಶತಕಗಳನ್ನೂ ಸಹ ಬಾರಿಸಿದ್ದರು.

ಇದೀಗ 34 ಟೆಸ್ಟ್ ಪಂದ್ಯಗಳಲ್ಲಿ 58 ಇನಿಂಗ್ಸ್ ಆಡಿರುವ ರಿಷಭ್ ಪಂತ್ 74.10 ಸ್ಟ್ರೈಕ್ ರೇಟ್ನಲ್ಲಿ ಒಟ್ಟು 2,419 ರನ್ ಕಲೆಹಾಕಿದ್ದಾರೆ. ಈ ವೇಳೆ ಪಂತ್ ಬ್ಯಾಟ್ನಿಂದ 6 ಶತಕ ಹಾಗೂ 11 ಅರ್ಧಶತಕಗಳು ಮೂಡಿಬಂದಿವೆ.

ಅತ್ತ 34 ಟೆಸ್ಟ್ ಪಂದ್ಯಗಳ ಮುಕ್ತಾಯದ ವೇಳೆಗೆ ಇಬ್ಬರ ರನ್ ಸರಾಸರಿ ಮತ್ತು ಸ್ಟ್ರೈಕ್ ರೇಟ್ ಹಾಗೂ ಶತಕ-ಅರ್ಧಶತಕಗಳ ಸಂಖ್ಯೆಗಳು ಅಸುಪಾಸಿನಲ್ಲಿವೆ. ಹೀಗಾಗಿಯೇ ರಿಷಭ್ ಪಂತ್ ಹೊಸ ಯುಗದ ಆ್ಯಡಂ ಗಿಲ್ಕ್ರಿಸ್ಟ್ ಎಂದು ವರ್ಣಿಸಲಾಗುತ್ತಿದೆ. ಈ ವರ್ಣಿಕೆಯೊಂದಿಗೆ ಪಂತ್ ಗಿಲ್ಲಿಯನ್ನು ಮೀರಿಸಲಿದ್ದಾರಾ ಕಾದು ನೋಡಬೇಕಿದೆ.

ಅಂದಹಾಗೆ ಚೆನ್ನೈನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್ಗೆ ಮರಳಿದ್ದಾರೆ. ಇದರೊಂದಿಗೆ ಭಾರತದ ಪರ ಅತ್ಯಧಿಕ ಟೆಸ್ಟ್ ಶತಕ ಸಿಡಿಸಿದ ವಿಕೆಟ್ ಕೀಪರ್ಗಳ ಪಟ್ಟಿಯಲ್ಲಿ ಧೋನಿಯ ದಾಖಲೆಯನ್ನು ಸರಿಗಟ್ಟಿದ್ದಾರೆ. ಎಂಎಸ್ ಧೋನಿ ಒಟ್ಟು 6 ಶತಕ ಬಾರಿಸಿದ್ದರೆ, ಇದೀಗ ಪಂತ್ ಕೂಡ ಆರರ ಸಂಖ್ಯೆಯನ್ನು ಮುಟ್ಟಿದ್ದಾರೆ. ಅಲ್ಲದೆ ಮುಂದಿನ ಪಂದ್ಯದಲ್ಲಿ ರಿಷಭ್ ಪಂತ್ ಒಂದು ಶತಕ ಬಾರಿಸಿದರೆ, ಟೀಮ್ ಇಂಡಿಯಾ ಪರ ಅತ್ಯಧಿಕ ಟೆಸ್ಟ್ ಸೆಂಚುರಿ ಸಿಡಿಸಿದ ವಿಕೆಟ್ ಕೀಪರ್ ಎನಿಸಿಕೊಳ್ಳಲಿದ್ದಾರೆ.
