Updated on: Jan 18, 2024 | 6:21 AM
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದರು. ಈ ಶತಕದೊಂದಿಗೆ ಕ್ರಿಕೆಟ್ ಇತಿಹಾಸದಲ್ಲೇ ಯಾರೂ ಕೂಡ ಮಾಡದ ವಿಶೇಷ ದಾಖಲೆಯೊಂದನ್ನು ಹಿಟ್ಮ್ಯಾನ್ ತಮ್ಮದಾಗಿಸಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 69 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಅಜೇಯ 121 ರನ್ ಬಾರಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 5 ಶತಕ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು.
ಹಾಗೆಯೇ ಮೂರು ಮಾದರಿಯ ಕ್ರಿಕೆಟ್ನಲ್ಲಿ ಕನಿಷ್ಠ 5 ಶತಕಗಳನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎಂಬ ವಿಶ್ವ ದಾಖಲೆಯನ್ನೂ ಕೂಡ ಬರೆದರು. ಅಂದರೆ ರೋಹಿತ್ ಶರ್ಮಾ ಅವರನ್ನು ಹೊರತುಪಡಿಸಿ ವಿಶ್ವದ ಯಾವುದೇ ಬ್ಯಾಟರ್ ಮೂರು ಮಾದರಿಯಲ್ಲಿ ಕನಿಷ್ಠ 5 ಶತಕಗಳನ್ನು ಬಾರಿಸಿಲ್ಲ.
ಹಿಟ್ಮ್ಯಾನ್ ಏಕದಿನ ಕ್ರಿಕೆಟ್ನಲ್ಲಿ 31 ಶತಕಗಳನ್ನು ಬಾರಿಸಿದ್ದರೆ, ಟೆಸ್ಟ್ ಕ್ರಿಕೆಟ್ನಲ್ಲಿ 10 ಸೆಂಚುರಿ ಸಿಡಿಸಿದ್ದಾರೆ. ಇದೀಗ ಟಿ20 ಯಲ್ಲೂ 5 ಶತಕಗಳನ್ನು ಬಾರಿಸಿ ಮೂರು ಮಾದರಿ ಕ್ರಿಕೆಟ್ನಲ್ಲಿ ಕನಿಷ್ಠ 5 ಶತಕಗಳನ್ನು ಬಾರಿಸಿದ ವಿಶ್ವದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದಲ್ಲದೆ ಈ ಶತಕದೊಂದಿಗೆ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ನಾಯಕ ಎಂಬ ವಿಶ್ವ ದಾಖಲೆಯನ್ನೂ ಕೂಡ ಹಿಟ್ಮ್ಯಾನ್ ತಮ್ಮದಾಗಿಸಿಕೊಂಡಿದ್ದಾರೆ. ಅದು ಕೂಡ ಮಾಜಿ ನಾಯಕ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ 50 ಪಂದ್ಯಗಳಲ್ಲಿ ನಾಯಕನಾಗಿ ಕಣಕ್ಕಿಳಿದಿದ್ದಾರೆ. ಈ ವೇಳೆ 1570 ರನ್ ಕಲೆಹಾಕಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ 54 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವ ಮೂಲಕ ರೋಹಿತ್ ಶರ್ಮಾ 1647 ರನ್ ಕಲೆಹಾಕಿ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ರಣರೋಚಕ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ರೋಹಿತ್ ಶರ್ಮಾ ತಮ್ಮ ಫಾರ್ಮ್ಗೆ ಮರಳಿದ್ದಾರೆ. ಈ ಮರಳುವಿಕೆಯೊಂದಿಗೆ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿರುವುದು ವಿಶೇಷ.