- Kannada News Photo gallery Cricket photos Ind vs SA Sanju Samson Crosses 1000 T20I Runs, 8000 T20 Runs
IND vs SA: 1000, 8000..! ಟಿ20 ಕ್ರಿಕೆಟ್‌ನಲ್ಲಿ ಸಂಜು ಸ್ಯಾಮ್ಸನ್ ಸೂಪರ್ ಶೋ
Sanju Samson 1000 T20I runs: ಶುಭ್ಮನ್ ಗಿಲ್ ಗಾಯದಿಂದಾಗಿ ಸಂಜು ಸ್ಯಾಮ್ಸನ್ಗೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೊನೆಯ ಅವಕಾಶ ದೊರೆಯಿತು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಸಂಜು, ಆರಂಭಿಕರಾಗಿ ಉತ್ತಮ ಪ್ರದರ್ಶನ ನೀಡಿದರು. ತಮ್ಮ ಇನ್ನಿಂಗ್ಸ್‌ನಲ್ಲಿ 1000 ಅಂತರರಾಷ್ಟ್ರೀಯ T20 ರನ್ಗಳು ಹಾಗೂ ಒಟ್ಟಾರೆ 8000 T20 ರನ್‌ಗಳ ಗಡಿ ದಾಟಿದರು.
Updated on: Dec 19, 2025 | 8:11 PM

ಭಾರತ ಟಿ20 ತಂಡಕ್ಕೆ ಉಪನಾಯಕನಾಗಿ ಶುಭ್ಮನ್ ಗಿಲ್ ಆಗಮನದಿಂದಾಗಿ ಆರಂಭಿಕ ಸ್ಥಾನವನ್ನು ಕಳೆದುಕೊಳ್ಳುವುದರ ಜೊತೆಗೆ ಈ ತಂಡದಿಂದ ಹೊರಬೀಳುವ ಆತಂಕದಲ್ಲಿದ್ದ ಸಂಜು ಸ್ಯಾಮ್ಸನ್ಗೆ ಕೊನೆಯ ಅವಕಾಶವಾಗಿ ತಂಡದಲ್ಲಿ ಆಡುವ ಅದೃಷ್ಟ ಒದಗಿ ಬಂದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಸಂಜು ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆದಿದ್ದಾರೆ.

ಶುಭ್ಮನ್ ಗಿಲ್ ಗಾಯಗೊಂಡಿರುವ ಕಾರಣ ಅವರನ್ನು ಈ ಪಂದ್ಯದಿಂದ ಹೊರಗಿಡಲಾಗಿದೆ. ಹೀಗಾಗಿ ಅವರ ಸ್ಥಾನದಲ್ಲಿ ಆಡುವ ಅವಕಾಶ ಪಡೆದಿರುವ ಸಂಜು ಸ್ಯಾಮ್ಸನ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಸುಳಿವು ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಅಭಿಷೇಕ್ ಶರ್ಮಾ ಜೊತೆಗೂಡಿ ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಿಕೊಟ್ಟರು.

ಬಹಳ ದಿನಗಳ ನಂತರ ತಂಡದಲ್ಲಿ ಆಡುವ ಅವಕಾಶ ಪಡೆದಿದ್ದ ಸಂಜು ಮೊದಲ ಎಸೆತದಿಂದಲೇ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಸಂಜು ತಮ್ಮ ಇನ್ನಿಂಗ್ಸ್‌ನಲ್ಲಿ 5 ರನ್ ಕಲೆಹಾಕಿದ ಕೂಡಲೇ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 1000 ರನ್‌ಗಳ ಗಡಿ ದಾಟಿದರು. ಈ ಮೂಲಕ ಈ ಸಾಧನೆ ಮಾಡಿದ 14 ನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದರ ಜೊತೆಗೆ ಸಂಜು ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 8,000 ರನ್‌ಗಳ ಗಡಿ ಕೂಡ ದಾಟಿದರು. ತಮ್ಮ ಟಿ20 ವೃತ್ತಿಜೀವನದಲ್ಲಿ ಇದುವರೆಗೆ 319 ಪಂದ್ಯಗಳನ್ನಾಡಿರುವ ಸಂಜು 303 ಇನ್ನಿಂಗ್ಸ್‌ಗಳಲ್ಲಿ 8,000 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ. 30 ಕ್ಕಿಂತ ಹೆಚ್ಚು ಸರಾಸರಿ ಮತ್ತು 136 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಸಂಜು ಈ ಮಾದರಿಯಲ್ಲಿ 6 ಶತಕಗಳು ಮತ್ತು 51 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಇನ್ನು 2015 ರಲ್ಲಿ ಜಿಂಬಾಬ್ವೆ ತಂಡದ ವಿರುದ್ಧ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಸಂಜು ಸ್ಯಾಮ್ಸನ್, ಇಲ್ಲಿಯವರೆಗೆ 51 ಪಂದ್ಯಗಳನ್ನಾಡಿದ್ದು, 43 ಇನ್ನಿಂಗ್ಸ್‌ಗಳಲ್ಲಿ 25.51 ಸರಾಸರಿ ಮತ್ತು 147.40 ಸ್ಟ್ರೈಕ್ ರೇಟ್‌ನಲ್ಲಿ 1,000 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 3 ಶತಕಗಳು ಮತ್ತು 3 ಅರ್ಧಶತಕಗಳು ಸೇರಿವೆ. ಹಾಗೆಯೇ ಕ್ಯಾಲೆಂಡರ್ ವರ್ಷದಲ್ಲಿ 3 ಟಿ20 ಅಂತರರಾಷ್ಟ್ರೀಯ ಶತಕಗಳನ್ನು ಗಳಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್.

ಭಾರತದ ಪರ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ರೋಹಿತ್ ಶರ್ಮಾ (4,231) ಹೆಸರಿನಲ್ಲಿದೆ. ಅವರ ನಂತರ ವಿರಾಟ್ ಕೊಹ್ಲಿ (4,188) ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ನಾಯಕ ಸೂರ್ಯಕುಮಾರ್ ಯಾದವ್ (2,783) ಮೂರನೇ ಸ್ಥಾನದಲ್ಲಿದ್ದಾರೆ. ಕೆಎಲ್ ರಾಹುಲ್ (2,265) ನಾಲ್ಕನೇ ಸ್ಥಾನದಲ್ಲಿದ್ದರೆ, ಹಾರ್ದಿಕ್ ಪಾಂಡ್ಯ (1,939) ಐದನೇ ಸ್ಥಾನದಲ್ಲಿದ್ದಾರೆ.




