- Kannada News Photo gallery Cricket photos Sanju Samson IPL Trade: CSK & RR Negotiations, Player Swap Details
ಸಂಜು ಬದಲಿಗೆ ಸಿಎಸ್‌ಕೆ ಬಳಿ ಈ ಮೂವರು ಆಟಗಾರರಲ್ಲಿ ಒಬ್ಬರನ್ನು ಕೇಳಿದ ರಾಜಸ್ಥಾನ್?
Sanju Samson IPL Trade: ಐಪಿಎಲ್ ಟ್ರೇಡಿಂಗ್ ವಿಂಡೋ ತೆರೆದಿರುವ ಹಿನ್ನೆಲೆಯಲ್ಲಿ, ಸಂಜು ಸ್ಯಾಮ್ಸನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್‌ಗೆ ವರ್ಗಾಯಿಸುವ ಬಗ್ಗೆ ರಾಜಸ್ಥಾನ್ ರಾಯಲ್ಸ್ ಮತ್ತು CSK ನಡುವೆ ಮಾತುಕತೆ ನಡೆಯುತ್ತಿದೆ. ರಾಜಸ್ಥಾನ್, ಸಂಜು ಬದಲಾಗಿ ರುತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ ಅಥವಾ ಶಿವಂ ದುಬೆ ಅವರಲ್ಲಿ ಒಬ್ಬರನ್ನು ಬಯಸುತ್ತಿದೆ. ಆದರೆ CSK, ಸಂಜು ಅವರನ್ನು ನಗದು ಮೊತ್ತಕ್ಕೆ ಪಡೆಯಲು ಬಯಸುತ್ತಿದೆ. ಒಪ್ಪಂದ ಕಾಣದಿದ್ದರೆ, ಸಂಜು ಹರಾಜಿನಲ್ಲಿ ಲಭ್ಯವಾಗಬಹುದು.
Updated on: Aug 13, 2025 | 8:47 PM

ಮುಂದಿನ ಆವೃತ್ತಿಯ ಐಪಿಎಲ್ ಆರಂಭಕ್ಕೆ ಸಾಕಷ್ಟು ಸಮಯ ಉಳಿದಿದೆ. ಆದಾಗ್ಯೂ ಐಪಿಎಲ್ ಟ್ರೇಡಿಂಗ್ ವಿಂಡೋ ತೆರೆದಿದ್ದು, ಈಗಾಗಲೇ ಕೆಲವು ಆಟಗಾರರನ್ನು ಟ್ರೇಡ್ ಮಾಡಿಕೊಳ್ಳಲು ಕೆಲವು ಫ್ರಾಂಚೈಸಿಗಳು ಮುಂದಾಗಿವೆ ಎಂದು ವರದಿಯಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ಸಿಎಸ್‌ಕೆ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಮಾತುಕತೆ ಶುರುವಾಗಿದೆ ಎಂದು ಹೇಳಲಾಗುತ್ತಿದೆ.

ವಾಸ್ತವವಾಗಿ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಮುಂದಿನ ಆವೃತ್ತಿಗೂ ಮುನ್ನ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಲ್ಲದೆ ತನ್ನನ್ನು ತಂಡದಿಂದ ಬಿಡುಗಡೆ ಮಾಡುವಂತೆ ಅಥವಾ ಬೇರೊಂದು ತಂಡದೊಂದಿಗೆ ಟ್ರೇಡ್ ಮಾಡಿಕೊಳ್ಳುವಂತೆ ಸಂಜು ಸ್ಯಾಮ್ಸನ್ ಈಗಾಗಲೇ ಫ್ರಾಂಚೈಸಿ ಬಳಿ ಕೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೀಗ ಕೇಳಿಬಂದಿರುವ ಹೊಸ ಮಾಹಿತಿಯ ಪ್ರಕಾರ, ಸಂಜು ಸ್ಯಾಮ್ಸನ್ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮುಂದಾಗಿದ್ದು, ಈ ಬಗ್ಗೆ ರಾಜಸ್ಥಾನ್ ಬಳಿ ಮಾತುಕತೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ರಾಜಸ್ಥಾನ್ ರಾಯಲ್ಸ್ ಕೂಡ ಸಂಜು ಸ್ಯಾಮ್ಸನ್ ಬದಲಿಗೆ ಬೇರೆ ಆಟಗಾರನಿಗಾಗಿ ಸಿಎಸ್‌ಕೆ ಬಳಿ ಬೇಡಿಕೆ ಇಟ್ಟಿದೆ ಎನ್ನಲಾಗುತ್ತಿದೆ.

ಸಿಕ್ಕಿರುವ ಮಾಹಿತಿ ಪ್ರಕಾರ, ಸಂಜು ಸ್ಯಾಮ್ಸನ್ ಬದಲಿಗೆ ರಾಜಸ್ಥಾನ್ ಫ್ರಾಂಚೈಸಿ, ಸಿಎಸ್‌ಕೆ ತಂಡದಲ್ಲಿರುವ ರವೀಂದ್ರ ಜಡೇಜಾ, ರುತುರಾಜ್ ಗೈಕ್ವಾಡ್ ಮತ್ತು ಶಿವಂ ದುಬೆ ಈ ಮೂವರಲ್ಲಿ ಒಬ್ಬರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ. ಆದಾಗ್ಯೂ, ಈ ವಿಷಯದ ಬಗ್ಗೆ ಸಿಎಸ್‌ಕೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎನ್ನಲಾಗುತ್ತಿದೆ.

ವರದಿಗಳ ಪ್ರಕಾರ, ಸಿಎಸ್‌ಕೆ ತನ್ನ ತಂಡದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಸೇರಿಸಿಕೊಳ್ಳಲು ಬಯಸಿದೆ. ಇದಲ್ಲದೆ, ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಸಂಜು ಬಗ್ಗೆ ಆಸಕ್ತಿ ತೋರಿಸುತ್ತಿದೆ. ವರದಿಗಳ ಪ್ರಕಾರ, ಸಂಜು ಸ್ಯಾಮ್ಸನ್ ಸಿಎಸ್‌ಕೆ ಸೇರಲು ಬಯಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಐಪಿಎಲ್ 2025 ರ ಅಂತ್ಯದ ನಂತರ ಸಂಜು, ಅಮೆರಿಕದಲ್ಲಿ ಸಿಎಸ್‌ಕೆ ಆಡಳಿತ ಮಂಡಳಿ ಮತ್ತು ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರನ್ನು ಭೇಟಿಯಾಗಿದ್ದರು.

ಸಂಜು ಸ್ಯಾಮ್ಸನ್ ಬದಲಿಗೆ ರಾಜಸ್ಥಾನ್ ರಾಯಲ್ಸ್ ತಂಡವು ರುತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ ಮತ್ತು ಶಿವಂ ದುಬೆ ಅವರಲ್ಲಿ ಒಬ್ಬರನ್ನು ಸಿಎಸ್ಕೆಯಿಂದ ಟ್ರೇಡ್ ಮಾಡಿಕೊಳ್ಳಲು ಬಯಸುತ್ತಿದೆ ಎಂದು ವರದಿಗಳು ತಿಳಿಸಿವೆ . ಆದಾಗ್ಯೂ ಸಂಜು ಸ್ಯಾಮ್ಸನ್ ಅವರನ್ನು ನಗದು ರೂಪದಲ್ಲಿ ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಸಿಎಸ್‌ಕೆ ಸಿದ್ಧವಾಗಿದೆ. ಆದರೆ ರಾಜಸ್ಥಾನ್ ಮಾತ್ರ ಬದಲಿಯಾಗಿ ಸ್ಟಾರ್ ಆಟಗಾರನನ್ನು ಕೇಳುತ್ತಿದೆ. ಅಮತಿಮವಾಗಿ ಎರಡೂ ತಂಡಗಳು ಒಪ್ಪಂದಕ್ಕೆ ಬರಲು ಸಾಧ್ಯವಾಗದಿದ್ದರೆ, ಸಂಜು ಸ್ಯಾಮ್ಸನ್ ಅವರನ್ನು ಹರಾಜಿನಲ್ಲಿ ಕಾಣಬಹುದಾಗಿದೆ.




