ಬೋಲ್ಯಾಂಡ್ ಎಸೆತಕ್ಕೆ 110 ವರ್ಷಗಳ ಹಳೆಯ ವಿಶ್ವ ದಾಖಲೆ ಬೌಲ್ಡ್
West Indies vs Australia, 3rd Test: ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಪ್ರಥಮ ಇನಿಂಗ್ಸ್ನಲ್ಲಿ 225 ರನ್ಗಳಿಸಿ ಆಲೌಟ್ ಆಗಿತ್ತು, ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ವೆಸ್ಟ್ ಇಂಡೀಸ್ ಕೇವಲ 143 ರನ್ಗಳಿಗೆ ಸರ್ವಪತನ ಕಂಡಿದೆ. ಇದೀಗ ಆಸ್ಟ್ರೇಲಿಯಾ ತಂಡವು ದ್ವಿತೀಯ ಇನಿಂಗ್ಸ್ ಆರಂಭಿಸಿದ್ದು 2ನೇ ದಿನದಾಟದ ಮುಕ್ತಾಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 99 ರನ್ಗಳಿಸಿದೆ.
Updated on:Jul 14, 2025 | 2:02 PM

ಟೆಸ್ಟ್ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ವೇಗಿ ಸ್ಕಾಟ್ ಬೋಲ್ಯಾಂಡ್ (Scott Boland) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ 2000 ಎಸೆತಗಳಲ್ಲಿ ಅತೀ ಕಡಿಮೆ ರನ್ ನೀಡಿ ವಿಕೆಟ್ ಕಬಳಿಸುವ ಮೂಲಕ ಎಂಬುದು ವಿಶೇಷ. ಅಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 2000 ಎಸೆತಗಳನ್ನು ಎಸೆದು ಅತೀ ಕಡಿಮೆ ರನ್ಗಳ ಒಳಗೆ ವಿಕೆಟ್ ಕಬಳಿಸಿದ ವಿಶ್ವ ದಾಖಲೆ ಸ್ಕಾಟ್ ಬೋಲ್ಯಾಂಡ್ ಪಾಲಾಗಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 13.1 ಓವರ್ಗಳನ್ನು ಎಸೆದಿರುವ ಸ್ಕಾಟ್ ಬೋಲ್ಯಾಂಡ್ ಕೇವಲ 34 ರನ್ ನೀಡಿ 3 ವಿಕೆಟ್ ಕಬಳಿಸಿದರು. ಈ 13.1 ಓವರ್ಗಳೊಂದಿಗೆ ಬೋಲ್ಯಾಂಡ್ ಟೆಸ್ಟ್ ಕ್ರಿಕೆಟ್ನಲ್ಲಿ 2000 ಎಸೆತಗಳನ್ನು ಪೂರೈಸಿದ್ದಾರೆ. ಇದೇ ವೇಳೆ ಅವರು 17.33 ಸರಾಸರಿಯಲ್ಲಿ ವಿಕೆಟ್ ಕಬಳಿಸಿದ್ದಾರೆ.

ಅಂದರೆ 2000 ಎಸೆತಗಳಲ್ಲಿ ಸ್ಕಾಟ್ ಬೋಲ್ಯಾಂಡ್ 17.33 ರ ರನ್ ಸರಾಸರಿಯಲ್ಲಿ ಒಟ್ಟು 59 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ (1915 ರಿಂದ) ಕನಿಷ್ಠ 2000 ಎಸೆತಗಳನ್ನು ಎಸೆದು ಅತ್ಯುತ್ತಮ ಬೌಲಿಂಗ್ ಸರಾಸರಿ ಹೊಂದಿರುವ ಬೌಲರ್ ಎಂಬ ಹೆಗ್ಗಳಿಕೆಯನ್ನು ಸ್ಕಾಟ್ ಬೋಲ್ಯಾಂಡ್ ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಆಸ್ಟ್ರೇಲಿಯಾದ ಬರ್ಟ್ ಐರನ್‌ಮಾಂಗರ್ ಹೆಸರಿನಲ್ಲಿತ್ತು. 1928 ರಿಂದ 1933 ರವರೆಗೆ ಟೆಸ್ಟ್ ಕ್ರಿಕೆಟ್ನಲ್ಲಿ 2000 ಎಸೆತಗಳನ್ನು ಎಸೆದಿದ್ದ ಐರನ್‌ಮಾಂಗರ್ 17.97 ಸರಾಸರಿಯಲ್ಲಿ 71 ವಿಕೆಟ್ ಕಬಳಿಸಿರುವುದು ಈವರೆಗಿನ ವಿಶ್ವ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಸ್ಕಾಟ್ ಬೋಲ್ಯಾಂಡ್ ಯಶಸ್ವಿಯಾಗಿದ್ದಾರೆ.

ಟೆಸ್ಟ್ ಕ್ರಿಕೆಟ್ನಲ್ಲಿ ಈವರೆಗೆ 14 ಪಂದ್ಯಗಳನ್ನಾಡಿರುವ ಸ್ಕಾಟ್ ಬೋಲ್ಯಾಂಡ್ 26 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ 2220 ಎಸೆತಗಳನ್ನು ಎಸೆದಿರುವ ಅವರು 1023 ರನ್ ನೀಡಿ ಒಟ್ಟು 59 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಕನಿಷ್ಠ 2 ಸಾವಿರ ಎಸೆತಗಳನ್ನು ಎಸೆದು ಅತೀ ಕಡಿಮೆ ಸರಾಸರಿಯಲ್ಲಿ (17.33) ವಿಕೆಟ್ ಕಬಳಿಸಿದ ಬೌಲರ್ ಎಂಬ ವಿಶ್ವ ದಾಖಲೆಯನ್ನು ಸ್ಕಾಟ್ ಬೋಲ್ಯಾಂಡ್ ತಮ್ಮದಾಗಿಸಿಕೊಂಡಿದ್ದಾರೆ.
Published On - 1:59 pm, Mon, 14 July 25




