- Kannada News Photo gallery Cricket photos Shubman Gill Breaks Records: Most Runs by an Indian Captain in England Test Series
IND vs ENG: ಗವಾಸ್ಕರ್, ಕೊಹ್ಲಿ ದಾಖಲೆ ಮುರಿದು ನಂ.1 ಸ್ಥಾನಕ್ಕೇರಿದ ಶುಭ್ಮನ್ ಗಿಲ್
Shubman Gill Breaks Records: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಗವಾಸ್ಕರ್ ಮತ್ತು ಸೋಬರ್ಸ್ ಅವರ ದಾಖಲೆಗಳನ್ನು ಮುರಿದಿದ್ದಾರೆ. ನಾಯಕನಾಗಿ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಇಂಗ್ಲೆಂಡ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಸಹ ಮುರಿದಿದೆ. ಡಾನ್ ಬ್ರಾಡ್ಮನ್ ದಾಖಲೆಯನ್ನು ಮುರಿಯುವ ಅವಕಾಶವೂ ಅವರಿಗೆ ಇದೆ.
Updated on:Jul 31, 2025 | 7:33 PM

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಾಯಕ ಶುಭಮನ್ ಗಿಲ್ ಅವರ ಬ್ಯಾಟ್ ರನ್ಗಳ ಮಳೆ ಹರಿಸಿದೆ. ನಾಯಕನಾಗಿ ಗಿಲ್ ಪ್ರದರ್ಶನ ಅಷ್ಟಕಷ್ಟೆಯಾದರೂ ಆಟಗಾರನಾಗಿ ಗಿಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಸರಣಿಯಲ್ಲಿ ಶತಕಗಳ ಮಾಲೆ ಕಟ್ಟಿರುವ ಗಿಲ್, ಇದುವರೆಗೆ ಸಾಕಷ್ಟು ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದೀಗ ಓವಲ್ ಟೆಸ್ಟ್ನಲ್ಲೂ ಗಿಲ್, ಇಬ್ಬರು ಲೆಜೆಂಡರಿ ಆಟಗಾರರ ದಾಖಲೆ ಮುರಿದಿದ್ದಾರೆ.

ಆ ಇಬ್ಬರು ಲೆಜೆಂಡರಿ ಆಟಗಾರರಲ್ಲಿ ಮೊದಲ ಹೆಸರು ಗ್ಯಾರಿ ಸೋಬರ್ಸ್ ಮತ್ತು ಎರಡನೆಯದು ಸುನಿಲ್ ಗವಾಸ್ಕರ್. ಓವಲ್‌ನಲ್ಲಿ ಶುಭಮನ್ ಗಿಲ್ ಎರಡು ರನ್ ಗಳಿಸಿದ ತಕ್ಷಣ, ಅವರು ಗ್ಯಾರಿ ಸೋಬರ್ಸ್ ಅವರನ್ನು ಹಿಂದಿಕ್ಕಿದರೆ, 11 ರನ್ ಗಳಿಸಿದ ತಕ್ಷಣ ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ದಾಖಲೆ ಮುರಿದರು.

ವಾಸ್ತವವಾಗಿ ಶುಭ್ಮನ್ ಗಿಲ್ 11 ರನ್ ಬಾರಿಸಿದ ತಕ್ಷಣ ಭಾರತೀಯ ನಾಯಕನಾಗಿ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಈ ಮೊದಲು 1948-49ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸುನಿಲ್ ಗವಾಸ್ಕರ್ 732 ರನ್ ಗಳಿಸಿದ್ದರು, ಈಗ ಗಿಲ್ 733 ರನ್ಗಳೊಂದಿಗೆ ಅವರನ್ನು ಹಿಂದಿಕ್ಕಿದ್ದಾರೆ. ಇದು ಮಾತ್ರವಲ್ಲದೆ, ಸೆನಾ ದೇಶಗಳಲ್ಲಿ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಯಕ ಎಂಬ ಹೆಗ್ಗಳಿಕೆಗೂ ಗಿಲ್ ಪಾತ್ರರಾಗಿದ್ದಾರೆ.

ಸುನಿಲ್ ಗವಾಸ್ಕರ್ ಎರಡನೇ ಸ್ಥಾನಕ್ಕೆ ಕುಸಿದರೆ, ವಿರಾಟ್ ಕೊಹ್ಲಿ ಹೆಸರು ಮೂರನೇ ಸ್ಥಾನದಲ್ಲಿದೆ. ವಿರಾಟ್ ಕೊಹ್ಲಿ ಇದೇ ಇಂಗ್ಲೆಂಡ್ ವಿರುದ್ಧ 2017-18ರಲ್ಲಿ ಟೆಸ್ಟ್ ಸರಣಿಯಲ್ಲಿ 655 ರನ್ ಬಾರಿಸಿದ್ದರು. ಇದು ಮಾತ್ರವಲ್ಲದೆ ಅದೇ ವರ್ಷ ಅಂದರೆ 2017-18ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿಯೂ ಕೊಹ್ಲಿ 610 ರನ್ ಬಾರಿಸಿದ್ದು, ನಾಲ್ಕನೇ ಸ್ಥಾನದಲ್ಲಿದ್ದಾರೆ.

ಹಾಗೆಯೇ ಈ ಟೆಸ್ಟ್ ಸರಣಿಯಲ್ಲಿ ಗಿಲ್ 723 ರನ್ ಪೂರೈಸಿದ ಕೂಡಲೇ ಸೆನಾ ದೇಶಗಳಲ್ಲಿ ನಾಯಕನಾಗಿ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೊದಲು ಈ ದಾಖಲೆ ಗ್ಯಾರಿ ಸೋಬರ್ಸ್ ಹೆಸರಿನಲ್ಲಿತ್ತು, ಅವರು 1966 ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಆಡಿದ ಟೆಸ್ಟ್ ಸರಣಿಯಲ್ಲಿ ನಾಯಕನಾಗಿ ಒಟ್ಟು 722 ರನ್ ಗಳಿಸಿದ್ದರು.

ಇದು ಮಾತ್ರವಲ್ಲದೆ ಶುಭ್ಮನ್ ಗಿಲ್ ಇನ್ನೂ ಒಂದು ಪ್ರಮುಖ ದಾಖಲೆಗಳನ್ನು ಮುರಿಯುವ ಅವಕಾಶ ಹೊಂದಿದ್ದಾರೆ. ದಿಗ್ಗಜ ಬ್ಯಾಟರ್ ಡಾನ್ ಬ್ರಾಡ್ಮನ್ ಇಂಗ್ಲೆಂಡ್‌ನಲ್ಲಿ ಸರಣಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಬ್ರಾಡ್ಮನ್ 1936-37 ರ ಆಶಸ್ ಸರಣಿಯಲ್ಲಿ 810 ಬಾರಿಸಿದ್ದರು. ಈ ದಾಖಲೆ ಕಳೆದ 90 ವರ್ಷಗಳಿಂದಲೂ ಹಾಗೆಯೇ ಇದ್ದು, ಈಗ ಗಿಲ್ ಅದನ್ನು ಮುರಿಯುವ ಅವಕಾಶ ಹೊಂದಿದ್ದಾರೆ.
Published On - 7:32 pm, Thu, 31 July 25




