- Kannada News Photo gallery Cricket photos Shubman Gill's Meteoric Rise: From 21st to 6th in ICC Test Rankings
ICC Test Rankings: ಬರೋಬ್ಬರಿ 15 ಸ್ಥಾನ ಮೇಲೇರಿದ ಶುಭ್ಮನ್ ಗಿಲ್
ICC Test Rankings: ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ 430 ರನ್ ಗಳಿಸಿದ ಶುಭ್ಮನ್ ಗಿಲ್ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್ ಶ್ರೇಯಾಂಕದಲ್ಲಿ 21ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಏರಿದ್ದಾರೆ. ಇಂಗ್ಲೆಂಡ್ ವಿರುದ್ಧದ ಅದ್ಭುತ ಪ್ರದರ್ಶನದಿಂದಾಗಿ ಗಿಲ್ಗೆ ಈ ಭರ್ಜರಿ ಮುಂಬಡ್ತಿ ಸಿಕ್ಕಿದೆ. ಹ್ಯಾರಿ ಬ್ರೂಕ್ ಅಗ್ರಸ್ಥಾನದಲ್ಲಿದ್ದರೆ, ಜೋ ರೂಟ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
Updated on: Jul 09, 2025 | 3:48 PM

ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ 400 ಕ್ಕೂ ಅಧಿಕ ರನ್ ಕಲೆಹಾಕಿದ್ದ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ ಇದೀಗ ಐಸಿಸಿ ಹೊಸ ಟೆಸ್ಟ್ ಶ್ರೇಯಾಂಕದಲ್ಲಿ ಭರ್ಜರಿ ಮುಂಬಡ್ತಿ ಪಡೆದುಕೊಂಡಿದ್ದಾರೆ. ನೂತನ ರ್ಯಾಂಕಿಂಗ್ನಲ್ಲಿ 15 ಬ್ಯಾಟ್ಸ್‌ಮನ್‌ಗಳನ್ನು ಹಿಂದಿಕ್ಕಿರುವ ಶುಭಮನ್ ಗಿಲ್ ಆರನೇ ಸ್ಥಾನಕ್ಕೆ ಬಂದಿದ್ದಾರೆ.

ವಾಸ್ತವವಾಗಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಂತರ 21 ನೇ ಸ್ಥಾನದಲ್ಲಿದ್ದ ಶುಭ್ಮನ್ ಗಿಲ್ ಇದೀಗ ಎರಡನೇ ಟೆಸ್ಟ್ ನಂತರ ಆರನೇ ಸ್ಥಾನಕ್ಕೆ ತಲುಪಿದ್ದಾರೆ. ಉಳಿದಂತೆ ಇಂಗ್ಲೆಂಡ್ ತಂಡದ ಉಪನಾಯಕ ಹ್ಯಾರಿ ಬ್ರೂಕ್ ನಂಬರ್ 1 ಸ್ಥಾನವನ್ನು ಅಲಂಕರಿಸಿಕೊಂಡಿದ್ದರೆ, ಜೋ ರೂಟ್ ನಂಬರ್ 1 ರಿಂದ ನಂಬರ್ 2 ಸ್ಥಾನಕ್ಕೆ ಕುಸಿದಿದ್ದಾರೆ.

ಶುಭ್‌ಮನ್ ಗಿಲ್ ಇಂಗ್ಲೆಂಡ್ ಪ್ರವಾಸಕ್ಕೆ ಬಂದಾಗ, ವಿಮರ್ಶಕರು ಅವರ ತಂತ್ರವನ್ನು ಪ್ರಶ್ನಿಸುತ್ತಿದ್ದರು. ಆದರೆ ಮೊದಲ ಟೆಸ್ಟ್‌ನಲ್ಲಿಯೇ ಗಿಲ್ ಶತಕ ಗಳಿಸುವ ಮೂಲಕ ವಿಮರ್ಶಕರ ಬಾಯಿ ಮುಚ್ಚಿಸಿದರು. ಆದಾಗ್ಯೂ ಭಾರತ ಆ ಟೆಸ್ಟ್‌ನಲ್ಲಿ ಸೋಲನುಭವಿಸಿತು. ಇದರ ನಂತರ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಗಿಲ್ ಅದ್ಭುತ ಪ್ರದರ್ಶನ ನೀಡಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿದ್ದ ಗಿಲ್, ಎರಡನೇ ಇನ್ನಿಂಗ್ಸ್‌ನಲ್ಲಿ ಶತಕದ ಇನ್ನಿಂಗ್ಸ್ ಆಡಿದ್ದರು. ಈ ಮೂಲಕ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಬರೋಬ್ಬರಿ 430 ರನ್ ಬಾರಿಸಿದ್ದರು. ಈ ಪ್ರದರ್ಶನದ ಆಧಾರದ ಮೇಲೆ, 807 ರೇಟಿಂಗ್ ಪಾಯಿಂಟ್ ಪಡೆದಿರುವ ಶುಭ್ಮನ್ ಗಿಲ್ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಆರನೇ ಸ್ಥಾನದಲ್ಲಿದ್ದಾರೆ.

ಅಗ್ರಸ್ಥಾನಕ್ಕೇರಿರುವ ಹ್ಯಾರಿ ಬ್ರೂಕ್ ಮೊದಲ ಟೆಸ್ಟ್‌ನಲ್ಲಿ 99 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಬಾರಿಸಿದ್ದರು. ಹೀಗಾಗಿ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಸ್ಥಾನಕ್ಕೆ ಬಂದಿದ್ದಾರೆ. ಇತ್ತ ಎರಡೂ ಟೆಸ್ಟ್‌ಗಳಲ್ಲಿ ವಿಫಲರಾದ ಜೋ ರೂಟ್, ನಂಬರ್ 1 ಸ್ಥಾನವನ್ನು ಕಾಯ್ದುಕೊಳ್ಳಲು ಸಾಧ್ಯವಾಗದೆ ನಂ.2 ಸ್ಥಾನಕ್ಕೆ ಕುಸಿದಿದ್ದಾರೆ.

ಇತರ ಬ್ಯಾಟ್ಸ್‌ಮನ್‌ಗಳ ಬಗ್ಗೆ ಹೇಳುವುದಾದರೆ, ಕೇನ್ ವಿಲಿಯಮ್ಸನ್ ಮೂರನೇ ಸ್ಥಾನದಲ್ಲಿದ್ದರೆ, ಯಶಸ್ವಿ ಜೈಸ್ವಾಲ್ ನಾಲ್ಕನೇ ಸ್ಥಾನದಲ್ಲಿದ್ದಾರೆ ಮತ್ತು ಸ್ಟೀವ್ ಸ್ಮಿತ್ ಐದನೇ ಸ್ಥಾನದಲ್ಲಿದ್ದಾರೆ. ಟೆಂಬಾ ಬವುಮಾ 7 ನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಿಷಭ್ ಪಂತ್ ಒಂದು ಸ್ಥಾನ ಕುಸಿದು 8 ನೇ ಸ್ಥಾನಕ್ಕೆ ಇಳಿದಿದ್ದಾರೆ.

ಇಂಗ್ಲೆಂಡ್‌ನ ಜೇಮೀ ಸ್ಮಿತ್ 16 ಬ್ಯಾಟ್ಸ್‌ಮನ್‌ಗಳನ್ನು ಹಿಂದಿಕ್ಕುವ ಮೂಲಕ ಟಾಪ್ 10 ರೊಳಗೆ ಸ್ಥಾನ ಪಡೆದಿದ್ದಾರೆ. ಈಗ ಲಾರ್ಡ್ಸ್ ಟೆಸ್ಟ್ ಪ್ರಾರಂಭವಾಗಲಿದ್ದು, ಈ ಪಂದ್ಯದಲ್ಲಿ ರನ್ ಗಳಿಸುವ ಆಟಗಾರರು ಮತ್ತೆ ಟೆಸ್ಟ್ ಶ್ರೇಯಾಂಕದಲ್ಲಿ ಭರ್ಜರಿ ಮುಂಬಡ್ತಿ ಪಡೆಯಲಿದ್ದಾರೆ. ಇದೀಗ 6ನೇ ಸ್ಥಾನದಲ್ಲಿರುವ ಗಿಲ್ ಟೆಸ್ಟ್ ಸರಣಿ ಮುಗಿಯುವ ವೇಳೆಗೆ ಯಾವ ಸ್ಥಾನಕ್ಕೆ ಬರುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.




