- Kannada News Photo gallery Cricket photos Smriti Mandhana Joins Maharashtra Premier League for a Surprisingly Low Fee
ಕೇವಲ 5 ಲಕ್ಷ ರೂ.ಗೆ ಟಿ20 ಲೀಗ್ ಆಡಲು ಒಪ್ಪಂದ ಮಾಡಿಕೊಂಡ ಸ್ಮೃತಿ ಮಂಧಾನ
Smriti Mandhana: ಸ್ಮೃತಿ ಮಂಧಾನ ಅವರು ಮಹಾರಾಷ್ಟ್ರ ಪ್ರೀಮಿಯರ್ ಲೀಗ್ (ಎಂಪಿಎಲ್) ನ ರತ್ನಗಿರಿ ಜೆಟ್ಸ್ ತಂಡದೊಂದಿಗೆ 5 ಲಕ್ಷ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಇದು ಅವರ ವಾರ್ಷಿಕ ಆದಾಯಕ್ಕೆ ಹೋಲಿಸಿದರೆ ತುಂಬಾ ಕಡಿಮೆ. ಎಂಪಿಎಲ್ ನಿಯಮಗಳ ಪ್ರಕಾರ, ಐಕಾನ್ ಆಟಗಾರ್ತಿಯಾಗಿ ಇದು ಅವರಿಗೆ ಸಿಗುವ ಸಂಭಾವನೆ. ಈ ಟೂರ್ನಮೆಂಟ್ ಮೇ ಅಂತ್ಯದಲ್ಲಿ ಆರಂಭವಾಗಲಿದೆ.
Updated on: Apr 17, 2025 | 6:16 PM

ಭಾರತ ಮಹಿಳಾ ತಂಡದ ಸ್ಟಾರ್ ಬ್ಯಾಟರ್ ಹಾಗೂ ಉಪನಾಯಕಿ ಸ್ಮೃತಿ ಮಂಧಾನ ಪ್ರಸ್ತುತ ವಿಶ್ರಾಂತಿ ಮೂಡ್ನಲ್ಲಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್ ಆಡಿ ಮುಗಿಸಿದ ಬಳಿಕ ರಜೆಯಲ್ಲಿರುವ ಮಂಧಾನ ಮತ್ತೆ ಟೀಂ ಇಂಡಿಯಾದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದು ವಿಶ್ವಕಪ್ಗೆ ತಯಾರಿ ನಡೆಸಲಿದ್ದಾರೆ.

ಇವೆಲ್ಲದರ ನಡುವೆ ಸ್ಮೃತಿ ಮಂಧಾನ ಕೆಲವೇ ಐದು ಲಕ್ಷ ರೂಗಳಿಗೆ ಟೂರ್ನಮೆಂಟ್ ಆಡುವುದಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ. ಹೌದು.. ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನಲ್ಲಿ ಇದೇ ಮೊದಲ ಬಾರಿಗೆ ಸ್ಮೃತಿ ಮಂಧಾನ ರತ್ನಗಿರಿ ಜೆಟ್ಸ್ ತಂಡದ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಮಹಿಳಾ ಮಹಾರಾಷ್ಟ್ರ ಪ್ರೀಮಿಯರ್ ಲೀಗ್ನ ಎರಡನೇ ಸೀಸನ್ ಮೇ ಅಂತ್ಯದಲ್ಲಿ ಪ್ರಾರಂಭವಾಗಲಿದೆ. 2024 ರಿಂದ ಪ್ರಾರಂಭವಾಗಿರುವ ಈ ಮಹಿಳಾ ಪಂದ್ಯಾವಳಿ ಎರಡನೇ ಸೀಸನ್ನಲ್ಲಿ, ರತ್ನಗಿರಿ ಜೆಟ್ಸ್ ಕೂಡ ತನ್ನ ತಂಡವನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಮೊದಲ ಬಾರಿಗೆ, ರತ್ನಗಿರಿಯ ತಂಡವು ಮಹಿಳಾ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು, ಈ ಫ್ರಾಂಚೈಸಿ ದೊಡ್ಡ ಒಪ್ಪಂದ ಮಾಡಿಕೊಂಡಿದೆ.

ಈ ಲೀಗ್ನ ಹರಾಜಿಗೂ ಮೊದಲು ರತ್ನಗಿರಿ ಫ್ರಾಂಚೈಸಿ, ಸ್ಮೃತಿ ಮಂಧಾನ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದಾಗಿ ತಿಳಿಸಿದೆ. ಮಂಧಾನ ಅವರನ್ನು ಐಕಾನ್ ಆಟಗಾರ್ತಿಯಾಗಿ ತಂಡಕ್ಕೆ ಸೇರಿಸಿಕೊಂಡಿದೆ. ಅಂದರೆ ಸ್ಮೃತಿ ಯಾವುದೇ ಹರಾಜಿಗೆ ಬರದೆ ನೇರವಾಗಿ ಒಪ್ಪಂದ ಮಾಡಿಕೊಂಡಿದೆ. ಈಗ ಪ್ರಶ್ನೆ ಏನೆಂದರೆ, ಐಕಾನ್ ಆಟಗಾರ್ತಿಯಾಗಿ ಸ್ಮೃತಿಗೆ ಎಷ್ಟು ಹಣ ಸಿಗುತ್ತದೆ? ಎಂಬುದು.

WMPL ನಿಯಮಗಳ ಪ್ರಕಾರ, ಐಕಾನ್ ಆಟಗಾರನಿಗೆ 5 ಲಕ್ಷ ರೂ. ಸಂಬಳ ಸಿಗುತ್ತದೆ. ಇದಲ್ಲದೆ, ಹರಾಜಿನಲ್ಲಿ ಖರೀದಿಸಿದ ಯಾವುದೇ ಆಟಗಾರ್ತಿಯರ ಬೆಲೆ ಐಕಾನ್ ಆಟಗಾರ್ತಿಗಿಂತ ಹೆಚ್ಚಾದರೆ, ಫ್ರಾಂಚೈಸಿ ಆ ಆಟಗಾರ್ತಿಯ ಬಿಡ್‌ನ 10 ಪ್ರತಿಶತಕ್ಕೆ ಸಮನಾದ ಮೊತ್ತವನ್ನು ಐಕಾನ್ ಆಟಗಾರ್ತಿಗೆ ಪ್ರತ್ಯೇಕವಾಗಿ ಪಾವತಿಸುತ್ತದೆ.

ಸ್ಮೃತಿ ಮಂಧಾನ ಅವರ ವಾರ್ಷಿಕ ಆದಾಯಕ್ಕೆ ಹೋಲಿಸಿದರೆ ಈ ಸಂಬಳ ತುಂಬಾ ಸಾಧಾರಣವಾಗಿದೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮಂಧಾನಗೆ 3.4 ಕೋಟಿ ರೂ. ವೇತನ ನೀಡಲಾಗುತ್ತಿದೆ. ಇಷ್ಟೇ ಅಲ್ಲ, ಸ್ಮೃತಿ ಬಿಸಿಸಿಐನಿಂದ ವಾರ್ಷಿಕ ಒಪ್ಪಂದದಡಿಯಲ್ಲಿ 50 ಲಕ್ಷ ರೂ.ಗಳನ್ನು ಪಡೆಯುತ್ತಾರೆ.

ಹಾಗೆಯೇ ಟಿ20 ಪಂದ್ಯಕ್ಕೆ 3 ಲಕ್ಷ ರೂ., ಏಕದಿನ ಪಂದ್ಯಕ್ಕೆ 6 ಲಕ್ಷ ರೂ. ಮತ್ತು ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ. ವೇತನ ಪಡೆಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ವರ್ಷಕ್ಕೆ ಕೋಟ್ಯಂತರ ರೂಪಾಯಿ ಸಂಪಾದಿಸುವ ಮಂಧಾನ, ಕೇವಲ 5 ಲಕ್ಷ ರೂಪಾಯಿ ಸಂಬಳಕ್ಕೆ 2 ವಾರಗಳ ಟೂರ್ನಿಯನ್ನು ಆಡಲಿದ್ದಾರೆ.



















