
2026 ರ ಮಹಿಳಾ ಪ್ರೀಮಿಯರ್ ಲೀಗ್ ರಣರೋಚಕ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಯಿತು. ಎರಡು ಬಲಿಷ್ಠ ತಂಡಗಳ ನಡುವೆ ನಡೆದ ಈ ಫೈನಲ್ ಕಾಳಗವನ್ನು ಜಯಿಸುವಲ್ಲಿ ಸ್ಮೃತಿ ಮಂಧಾನ ಪಡೆ ಯಶಸ್ವಿಯಾಯಿತು. ಇಡೀ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಆರ್ಸಿಬಿ ಲೀಗ್ ಹಂತದಲ್ಲಿ 5 ಪಂದ್ಯಗಳನ್ನು ಗೆದ್ದು ನೇರವಾಗಿ ಫೈನಲ್ಗೇರಿತ್ತು.

ಇದೀಗ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸುವುದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 203 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್ಸಿಬಿ ಪರ ನಾಯಕಿ ಸ್ಮೃತಿ ಮಂಧಾನ ಹಾಗೂ ಜಾರ್ಜಿಯಾ ವಾಲ್ ಗೆಲುವಿನ ಅರ್ಧಶತಕ ಬಾರಿಸಿ ತಂಡವನ್ನು ಚಾಂಪಿಯನ್ ಮಾಡಿದರು.

ಈ ಫೈನಲ್ ಪಂದ್ಯದ ಗೆಲುವಿನೊಂದಿಗೆ ಆರ್ಸಿಬಿ, ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸಂಪ್ರದಾಯವನ್ನು ಮುರಿದು ಹೊಸ ಇತಿಹಾಸ ರಚಿಸಿದೆ. ವಾಸ್ತವವಾಗಿ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ನೇರವಾಗಿ ಫೈನಲ್‌ಗೇರಿದ ತಂಡವು ಇದುವರೆಗೆ ಒಮ್ಮೆಯೂ ಪ್ರಶಸ್ತಿ ಗೆದ್ದಿರಲಿಲ್ಲ. ಆದರೆ ನಾಲ್ಕನೇ ಆವೃತ್ತಿಯಲ್ಲಿ ನೇರವಾಗಿ ಫೈನಲ್ಗೇರಿದ್ದ ಆರ್ಸಿಬಿ ಟ್ರೋಫಿ ಎತ್ತಿಹಿಡಿಯುವುದರಲ್ಲೂ ಯಶಸ್ವಿಯಾಯಿತು.

2023 ರಲ್ಲಿ ನಡೆದಿದ್ದ ಮಹಿಳಾ ಪ್ರೀಮಿಯರ್ ಲೀಗ್ ಮೊದಲ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದ್ದವು. ಇದರಲ್ಲಿ ಡೆಲ್ಲಿ ನೇರವಾಗಿ ಫೈನಲ್ ಪ್ರವೇಶಿಸಿದ್ದರೆ, ಮುಂಬೈ ತಂಡ ಎಲಿಮಿನೇಟರ್ನಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಮಣಿಸಿ ಫೈನಲ್ಗೇರಿತ್ತು. ಈ ಫೈನಲ್‌ನಲ್ಲಿ ಮುಂಬೈ ಜಯಭೇರಿ ಬಾರಿಸಿತ್ತು.

2024 ರಲ್ಲಿ ನಡೆದಿದ್ದ ಎರಡನೇ ಆವೃತ್ತಿಯಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ನೇರವಾಗಿ ಫೈನಲ್ಗೆ ಅರ್ಹತೆ ಪಡೆದಿತ್ತು. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಲಿಮಿನೇಟರ್ನಲ್ಲಿ ಅಂದಿನ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಮೊಟ್ಟ ಮೊದಲ ಬಾರಿಗೆ ಫೈನಲ್ ಆಡಿತ್ತು. ಆ ಪಂದ್ಯವನ್ನು ಆರ್ಸಿಬಿ ಗೆದ್ದುಕೊಂಡು ಟ್ರೋಫಿ ಎತ್ತಿಹಿಡಿದಿತ್ತು.

ಕಳೆದ ಆವೃತ್ತಿಯಲ್ಲಿ ಅಂದರೆ 2025 ರ ಮಹಿಳಾ ಪ್ರೀಮಿಯರ್ ಲೀಗ್ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಲೀಗ್ ಹಂತದಲ್ಲಿ ನೀಡಿದ ಸೂಪರ್ ಪ್ರದರ್ಶನದಿಂದಾಗಿ ನೇರವಾಗಿ ಫೈನಲ್ ಪ್ರವೇಶಿಸಿತ್ತು. ಇತ್ತ ಎಲಿಮಿನೇಟರ್ನಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿದ್ದ ಮುಂಬೈ ಇಂಡಿಯನ್ಸ್ ತಂಡ ಎರಡನೇ ಬಾರಿಗೆ ಫೈನಲ್ಗೇರಿತ್ತು. ಫೈನಲ್ ಪಂದ್ಯದಲ್ಲಿ ಮತ್ತೆ ಡೆಲ್ಲಿ ತಂಡವನ್ನು ಸೋಲಿಸಿದ್ದ ಮುಂಬೈ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿದಿತ್ತು.

ಆದರೆ 2026 ರ ಆವೃತ್ತಿಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತು. ಲೀಗ್ ಹಂತದಲ್ಲಿ 5 ಪಂದ್ಯಗಳನ್ನು ಗೆಲ್ಲುವ ಮೂಲಕ ಆರ್ಸಿಬಿ ಫೈನಲ್ಗೇರಿತ್ತು. ಇತ್ತ ಡೆಲ್ಲಿ ಎಲಿಮಿನೇಟರ್ ಗೆದ್ದು ಫೈನಲ್ ಟಿಕೆಟ್ ಪಡೆದಿತ್ತು. ಹಿಂದಿನ ದಾಖಲೆಯನ್ನು ನೋಡಿ ಎಲ್ಲರೂ ಈ ಬಾರಿ ಡೆಲ್ಲಿ ತಂಡಕ್ಕೆ ಗೆಲುವು ಎಂಬ ಲೆಕ್ಕಾಚಾರದಲ್ಲಿದ್ದರು. ಆದರೆ ಆರ್ಸಿಬಿ ಫೈನಲ್ ಗೆದ್ದು ಎಲ್ಲಾ ಲೆಕ್ಕಾಚಾರಗಳನ್ನು ಸುಳ್ಳು ಮಾಡಿದೆ.