ಸೌತ್ ಆಫ್ರಿಕಾ ತಂಡದ ವಿಶ್ವ ದಾಖಲೆಯ ಚೇಸಿಂಗ್
South Africa vs West Indies, 2nd T20I: ಸೌತ್ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು 20 ಓವರ್ಗಳಲ್ಲಿ 221 ರನ್ ಕಲೆಹಾಕಿದ್ದರು. ಈ ಗುರಿಯನ್ನು 17.3 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಸೌತ್ ಆಫ್ರಿಕಾ ತಂಡ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
Updated on: Jan 31, 2026 | 7:59 AM

ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ವಿಶ್ವ ದಾಖಲೆ ನಿರ್ಮಿಸಿರುವುದು ಸೌತ್ ಆಫ್ರಿಕಾ ತಂಡ. ಅದು ಸಹ ಬರೋಬ್ಬರಿ 222 ರನ್ಗಳನ್ನು ಚೇಸ್ ಮಾಡುವ ಮೂಲಕ. ಈ ಚೇಸಿಂಗ್ನೊಂದಿಗೆ ಆಫ್ರಿಕಾ ಪಡೆ ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಸೆಂಚುರಿಯನ್ನ ಸೂಪರ್ ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 221 ರನ್ಗಳು.

222 ರನ್ಗಳ ಕಠಿಣ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ಪರ ಆರಂಭಿಕ ದಾಂಡಿಗ ಕ್ವಿಂಟನ್ ಡಿಕಾಕ್ ಕೇವಲ 43 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಶತದ ಬಳಿಕ ಕೂಡ ಆರ್ಭಟ ಮುಂದುವರೆಸಿದ ಡಿಕಾಕ್ 49 ಎಸೆತಗಳಲ್ಲಿ 10 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 115 ರನ್ ಚಚ್ಚಿದರು.

ಮತ್ತೊಂದೆಡೆ ರಯಾನ್ ರಿಕೆಲ್ಟನ್ ಕೇವಲ 36 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ ಅಜೇಯ 77 ರನ್ ಬಾರಿಸಿದರು.ಈ ಮೂಲಕ 17.3 ಓವರ್ಗಳಲ್ಲಿ 225 ರನ್ ಬಾರಿಸಿ ಸೌತ್ ಆಫ್ರಿಕಾ ತಂಡವು 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಜಯದೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ 220+ ರನ್ಗಳನ್ನು ಅತೀ ವೇಗವಾಗಿ ಚೇಸ್ ಮಾಡಿದ ವಿಶ್ವ ದಾಖಲೆಯೊಂದು ಸೌತ್ ಆಫ್ರಿಕಾ ತಂಡದ ಪಾಲಾಯಿತು.

ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು. 2018 ರಲ್ಲಿ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ 244 ರನ್ಗಳ ಗುರಿಯನ್ನು 18.5 ಓವರ್ಗಳಲ್ಲಿ ಚೇಸ್ ಮಾಡಿದ್ದರು. ಈ ಮೂಲಕ 7 ಎಸೆತಗಳನ್ನು ಬಾಕಿಯಿರಿಸಿ 220+ ರನ್ಗಳನ್ನು ಅತೀ ವೇಗವಾಗಿ ಚೇಸ್ ಮಾಡಿದ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದೀಗ ಈ ದಾಖಲೆಯನ್ನು ಮುರಿದು ಸೌತ್ ಆಫ್ರಿಕಾ ತಂಡ ಹೊಸ ಇತಿಹಾಸ ನಿರ್ಮಿಸಿದ್ದಾರೆ. ವೆಸ್ಟ್ ಇಂಡೀಸ್ ನೀಡಿದ 222 ರನ್ಗಳ ಗುರಿಯನ್ನು ಸೌತ್ ಆಫ್ರಿಕಾ ತಂಡ 17.3 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ 15 ಎಸೆತಗಳನ್ನು ಬಾಕಿಯಿರಿಸಿ 220+ ಗುರಿಯನ್ನು ಅತೀ ವೇಗವಾಗಿ ಚೇಸ್ ಮಾಡಿದ ವಿಶ್ವ ದಾಖಲೆಯನ್ನು ಸೌತ್ ಆಫ್ರಿಕಾ ತಂಡ ತನ್ನದಾಗಿಸಿಕೊಂಡಿದೆ.
