ಕ್ಯಾಚ್ ಹಿಡಿದು ವಿಶ್ವ ದಾಖಲೆ ಬರೆದ ಸ್ಟೀವ್ ಸ್ಮಿತ್
Steve Smith Record: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ಐವರು ಆಟಗಾರರು ಮಾತ್ರ 200 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಭಾರತದ ರಾಹುಲ್ ದ್ರಾವಿಡ್. ಇದೀಗ 200 ಕ್ಯಾಚ್ಗಳೊಂದಿಗೆ ಸ್ಟೀವ್ ಸ್ಮಿತ್ ಈ ದಾಖಲೆ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ (196) ಅವರ ದಾಖಲೆ ಮುರಿದು ಸ್ಮಿತ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
Updated on: Feb 09, 2025 | 2:03 PM

ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಫೀಲ್ಡರ್ ಸ್ಟೀವ್ ಸ್ಮಿತ್ 5 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ 2 ಕ್ಯಾಚ್ ಹಿಡಿದಿದ್ದ ಸ್ಮಿತ್, ದ್ವಿತೀಯ ಇನಿಂಗ್ಸ್ನಲ್ಲಿ ಅದ್ಭುತ ಫೀಲ್ಡಿಂಗ್ ಮೂಲಕ ಮತ್ತೆ ಮೂರು ಕ್ಯಾಚ್ಗಳನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ. ಈ ಐದು ಕ್ಯಾಚ್ಗಳೊಂದಿಗೆ ಸ್ಮಿತ್ ಆಸ್ಟ್ರೇಲಿಯಾ ಪರ ಟೆಸ್ಟ್ನಲ್ಲಿ 200 ಕ್ಯಾಚ್ಗಳನ್ನು ಹಿಡಿದ ಮೊದಲ ಫೀಲ್ಡರ್ ಎನಿಸಿಕೊಂಡಿದ್ದಾರೆ.

ಅಲ್ಲದೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 200 ಕ್ಯಾಚ್ಗಳನ್ನು ಹಿಡಿದ ವಿಶ್ವದ 5ನೇ ಫೀಲ್ಡರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದರ ಜೊತೆ ಅತೀ ಕಡಿಮೆ ಪಂದ್ಯಗಳ ಮೂಲಕ 200 ಕ್ಯಾಚ್ಗಳನ್ನು ಹಿಡಿದ ವಿಶ್ವ ದಾಖಲೆ ಕೂಡ ಸ್ಟೀವ್ ಸ್ಮಿತ್ ಪಾಲಾಗಿದೆ.

ಆಸ್ಟ್ರೇಲಿಯಾ ಪರ 116 ಟೆಸ್ಟ್ ಪಂದ್ಯಗಳ 221 ಇನಿಂಗ್ಸ್ಗಳಲ್ಲಿ ಫೀಲ್ಡಿಂಗ್ ಮಾಡಿರುವ ಸ್ಮಿತ್ ಒಟ್ಟು 200 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಈ ಮೂಲಕ 120 ಕ್ಕಿಂತ ಕಡಿಮೆ ಪಂದ್ಯಗಳಲ್ಲಿ 200 ಕ್ಯಾಚ್ಗಳನ್ನು ಹಿಡಿದ ವಿಶ್ವದ ಮೊದಲ ಫೀಲ್ಡರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸದ್ಯ 200 ಕ್ಯಾಚ್ಗಳನ್ನು ಹಿಡಿದಿರುವ ಸ್ಟೀವ್ ಸ್ಮಿತ್ ಮುಂಬರುವ ಪಂದ್ಯಗಳ ಮೂಲಕ ಅಗ್ರಸ್ಥಾನಕ್ಕೇರುವುದರಲ್ಲಿ ಡೌಟೇ ಇಲ್ಲ. ಏಕೆಂದರೆ ಸ್ಮಿತ್ಗಿಂತ ಮುಂದಿರುವುದು ಶ್ರೀಲಂಕಾದ ಮಹೇಲ ಜಯವರ್ಧನೆ (205) ಮತ್ತು ಇಂಗ್ಲೆಂಡ್ನ ಜೋ ರೂಟ್ (207) ಮಾತ್ರ. ಇವರಿಬ್ಬರನ್ನು ಹಿಂದಿಕ್ಕಲು ಸ್ಮಿತ್ಗೆ ಇನ್ನು 8 ಕ್ಯಾಚ್ಗಳ ಅವಶ್ಯಕತೆಯಿದೆ.

ಇನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಕ್ಯಾಚ್ಗಳನ್ನು ಹಿಡಿದ ವಿಶ್ವ ದಾಖಲೆ ಇರುವುದು ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೆಸರಿನಲ್ಲಿ. ಭಾರತದ ಪರ 164 ಟೆಸ್ಟ್ ಪಂದ್ಯಗಳ 301 ಇನಿಂಗ್ಸ್ಗಳಲ್ಲಿ ಫೀಲ್ಡಿಂಗ್ ಮಾಡಿರುವ ದ್ರಾವಿಡ್ ಒಟ್ಟು 210 ಕ್ಯಾಚ್ಗಳನ್ನು ಹಿಡಿದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಈ ದಾಖಲೆ ಮುರಿಯಲು ಸ್ಟೀವ್ ಸ್ಮಿತ್ಗೆ ಬೇಕಿರುವುದು ಕೇವಲ 11 ಕ್ಯಾಚ್ಗಳು ಮಾತ್ರ. ಇತ್ತ 35 ವರ್ಷದ ಸ್ಮಿತ್ ಇನ್ನೂ ಒಂದೆರಡು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆಯಲಿದ್ದಾರೆ. ಹೀಗಾಗಿ ದ್ರಾವಿಡ್ ಹೆಸರಿನಲ್ಲಿರುವ ಈ ವಿಶ್ವ ದಾಖಲೆಯನ್ನು ಸ್ಟೀವ್ ಸ್ಮಿತ್ ಮುರಿಯುವುದನ್ನು ಎದುರು ನೋಡಬಹುದು.



















