30 ವರ್ಷಗಳ ಬಳಿಕ ಅಬ್ಬರ… ರೋಹಿತ್ ಶರ್ಮಾ ವಿಶ್ವ ದಾಖಲೆ
Rohit Sharma Century Record: ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 90 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 7 ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 119 ರನ್ ಬಾರಿಸಿದ್ದರು. ಈ ಭರ್ಜರಿ ಬ್ಯಾಟಿಂಗ್ನೊಂದಿಗೆ ಹಿಟ್ಮ್ಯಾನ್ ಏಕದಿನ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಅದು ಕೂಡ ಸನತ್ ಜಯಸೂರ್ಯ ಹಾಗೂ ತಿಲಕರತ್ನೆ ದಿಲ್ಶಾನ್ ಅವರ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
Updated on: Feb 10, 2025 | 7:54 AM

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಲಯಕ್ಕೆ ಮರಳಿದ್ದಾರೆ. ಅದು ಕೂಡ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ. ಕಟಕ್ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಹಿಟ್ಮ್ಯಾನ್ 76 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಶತಕದೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಹೆಸರಿಗೆ ವಿಶೇಷ ವಿಶ್ವ ದಾಖಲೆಯೊಂದು ಸೇರ್ಪಡೆಯಾಯಿತು.

ಕಟಕ್ನಲ್ಲಿ ಮೂಡಿಬಂದಿರುವುದು ರೋಹಿತ್ ಶರ್ಮಾ ಅವರ 32ನೇ ಏಕದಿನ ಶತಕ. ಈ 32 ಶತಕಗಳಲ್ಲಿ 22 ಸೆಂಚುರಿಗಳು 30 ವರ್ಷಗಳ ಬಳಿಕ ಮೂಡಿಬಂದಿದ್ದು ಎಂಬುದು ವಿಶೇಷ. ಅಂದರೆ ರೋಹಿತ್ ಶರ್ಮಾ ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿದ ಬಳಿಕ ಬರೋಬ್ಬರಿ 22 ಏಕದಿನ ಸೆಂಚುರಿಗಳನ್ನು ಸಿಡಿಸಿದ್ದಾರೆ.

ಕಳೆದ 7 ವರ್ಷಗಳಲ್ಲಿ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ ಬಾರಿಸಿದ 22 ಶತಕಗಳು ಈಗ ವಿಶ್ವ ದಾಖಲೆ ಪಟ್ಟಿಗೆ ಸೇರ್ಪಡೆಯಾಗಿದೆ. ಅಂದರೆ 30 ವರ್ಷದ ಬಳಿಕ ಏಕದಿನ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಸೆಂಚುರಿ ಸಿಡಿಸಿದ ವಿಶ್ವ ದಾಖಲೆ ಇದೀಗ ಹಿಟ್ಮ್ಯಾನ್ ಪಾಲಾಗಿದೆ.

ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಸನತ್ ಜಯಸೂರ್ಯ ಹಾಗೂ ತಿಲಕರತ್ನೆ ದಿಲ್ಶಾನ್ ಹೆಸರಿನಲ್ಲಿತ್ತು. ಲಂಕಾ ದಾಂಡಿಗರಿಬ್ಬರು 30 ವರ್ಷವಾದ ಬಳಿಕ ಏಕದಿನ ಕ್ರಿಕೆಟ್ನಲ್ಲಿ ತಲಾ 21 ಶತಕಗಳನ್ನು ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದೀಗ 22 ಶತಕಗಳನ್ನು ಸಿಡಿಸಿ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ರೋಹಿತ್ ಶರ್ಮಾ ಸಫಲರಾಗಿದ್ದಾರೆ. ಈ ಮೂಲಕ 37 ವರ್ಷದ ರೋಹಿತ್ ಶರ್ಮಾ ತಮ್ಮ ನಿವೃತ್ತಿ ಅಂಚಿನಲ್ಲೂ ಸೆಂಚುರಿ ಸಿಡಿಸಿ ಹೊಸ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಈ ಶತಕದೊಂದಿಗೆ ರೋಹಿತ್ ಶರ್ಮಾ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದಾರೆ. 259 ಇನಿಂಗ್ಸ್ ಆಡಿರುವ ಹಿಟ್ಮ್ಯಾನ್ ಒಟ್ಟು 10987 ರನ್ ಬಾರಿಸಿ ಈ ದಾಖಲೆ ಬರೆದಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಸಚಿನ್ 18426 ರನ್ ಕಲೆಹಾಕಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.



















