
2026 ರ ಟಿ20 ವಿಶ್ವಕಪ್ ನಾಳೆಯಿಂದ ಅಂದರೆ ಫೆಬ್ರವರಿ 7 ರಿಂದ ಭಾರತ ಹಾಗೂ ಶ್ರೀಲಂಕಾದಲ್ಲಿ ಶುರುವಾಗುತ್ತಿದೆ. ಹಾಲಿ ಚಾಂಪಿಯನ್ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿಯುವ ಸಲುವಾಗಿ ಸಕಲ ತಯಾರಿಗಳನ್ನು ಮಾಡಿಕೊಂಡಿದೆ. ಆದರೆ ವಿಶ್ವಕಪ್ ಆರಂಭಕ್ಕೆ ಒಂದು ದಿನ ಇರುವಾಗ ಸೂರ್ಯಕುಮಾರ್ ಪಡೆಗೆ ದೊಡ್ಡ ಆಘಾತ ಎದುರಾಗಿದೆ.

ಕಳೆದೊಂದು ವರ್ಷದಿಂದ ಭಾರತದ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ವೇಗಿಯಾಗಿ ಕಾಣಿಸಿಕೊಂಡಿರುವ ಯುವ ವೇಗಿ ಹರ್ಷಿತ್ ರಾಣಾ ಗಾಯದ ಕಾರಣದಿಂದಾಗಿ ಪಂದ್ಯಾವಳಿಯಿಂದ ಹೊರಬಿದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದ ಸಮಯದಲ್ಲಿ ಹರ್ಷಿತ್ ರಾಣಾ ಗಾಯಗೊಂಡಿದ್ದರು. ಇದರಿಂದಾಗಿ ಅವರು ಪಂದ್ಯವನ್ನು ಮಧ್ಯದಲ್ಲೇ ತೊರೆದು ಪೆವಿಲಿಯನ್ ಸೇರಿಕೊಂಡಿದ್ದರು.

ಫೆಬ್ರವರಿ 4 ರಂದು ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಹರ್ಷಿತ್ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ಪಂದ್ಯದಲ್ಲಿ ಕೇವಲ ಒಂದು ಓವರ್ ಬೌಲಿಂಗ್ ಮಾಡಿದ್ದ ಹರ್ಷಇತ್ ಆ ನಂತರ ಮೈದಾನವನ್ನು ತೊರೆದಿದ್ದರು. ಅಂದಿನಿಂದ, ಹರ್ಷಿತ್ ಅವರ ಗಾಯದ ಬಗ್ಗೆ ತಂಡದೊಳಗೆ ಕಳವಳವಿತ್ತು. ಆದರೆ ಈಗ, ಅವರ ಪ್ರಯಾಣ ಪ್ರಾರಂಭವಾಗುವ ಮೊದಲೇ ಕೊನೆಗೊಂಡಿದೆ.

ಇದೀಗ ಅವರ ಗಾಯ ಗಂಭೀರವಾಗಿರುವುದರಿಂದ ಹರ್ಷಿತ್ ಚೊಚ್ಚಲ ಟಿ20 ವಿಶ್ವಕಪ್ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ. ಹರ್ಷಿತ್ ರಾಣಾಗೆ ಇದು ಮೊದಲ ಟಿ20 ವಿಶ್ವಕಪ್ ಆಗಿತ್ತು. ಅಲ್ಲದೆ ತಂಡದ ಪ್ರಮುಖ ವೇಗಿಗಳಲ್ಲೂ ಹರ್ಷಿತ್ ಒಬ್ಬರಾಗಿದ್ದರು. ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆಗಳು ಇದ್ದವು.

ಮಾಧ್ಯಮ ವರದಿಗಳ ಪ್ರಕಾರ, ಹರ್ಷಿತ್ ರಾಣಾ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅವರ ಮೊಣಕಾಲಿನ ಗಾಯ ಗಂಭೀರವಾಗಿದ್ದು, ಅವರ ಆಡಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ಸೂರ್ಯ, ಹರ್ಷಿತ್ ರಾಣಾ ಗಾಯಕ್ಕೆ ತುತ್ತಾಗಿದ್ದಾರೆ. ಪ್ರಸ್ತುತ ಅವರು ತಂಡದೊಂದಿಗೆ ಇದ್ದಾರೆ. ಶುಕ್ರವಾರ ಸಂಜೆಯ ವೇಳೆಗೆ ಆಡಳಿತ ಮಂಡಳಿ ಹರ್ಷಿತ್ ರಾಣಾ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಲಿದೆ ಎಂದಿದ್ದರು.

ಟೀಂ ಇಂಡಿಯಾದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ರಂತಹ ಅನುಭವಿ ವೇಗಿಗಳಿರುವಾಗ ತಂಡಕ್ಕೆ ಹರ್ಷಿತ್ ಅವರ ಅಲಭ್ಯತೆ ಹೆಚ್ಚು ಕಾಡುವ ಸಾಧ್ಯತೆಗಳಿಲ್ಲ. ಆದಾಗ್ಯೂ ಈ ಇಬ್ಬರಲ್ಲಿ ಒಬ್ಬರು ದುಬಾರಿಯಾದರೆ ಅವರನ್ನು ಬದಲಿಸಲು ಹರ್ಷಿತ್ ಅವಶ್ಯಕತೆ ಇತ್ತು. ಆದರೆ ಬೌಲಿಂಗ್ ಆಲ್ರೌಂಡರ್ಗಳಾಗಿ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಇರುವುದರಿಂದ ಇವರನ್ನು ಬಳಸಿಕೊಳ್ಳಲು ಮ್ಯಾನೇಜ್ಮೆಂಟ್ ಯೋಚಿಸಲಿದೆ.