
2026 ರ ಟಿ20 ವಿಶ್ವಕಪ್‌ನಲ್ಲಿ ತನ್ನ ಎರಡನೇ ಪಂದ್ಯವನ್ನಾಡುತ್ತಿರುವ ಟೀಂ ಇಂಡಿಯಾ, ಟೂರ್ನಿಯ 18ನೇ ಪಂದ್ಯದಲ್ಲಿ ನಮೀಬಿಯಾ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನಮೀಬಿಯಾ ಮೊದಲು ಬೌಲಿಂಗ್ ಆಯ್ದುಕೊಂಡಿತು. ಇದಾದ ಬಳಿಕ ತಂಡದ ಪ್ಲೇಯಿಂಗ್ 11 ಬಗ್ಗೆ ಮಾತನಾಡಿದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅಭಿಮಾನಿಗಳು ಆತಂಕ ಪಡುವಂತಹ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

ನಮೀಬಿಯಾ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದೆ. ಅದರಂತೆ ಅನಾರೋಗ್ಯದಿಂದ ಬಳಲುತ್ತಿರುವ ಅಭಿಷೇಕ್ ಶರ್ಮಾ ಹಾಗೂ ಮೊಹಮ್ಮದ್ ಸಿರಾಜ್ ಈ ಪಂದ್ಯದಿಂದ ಹೊರಬಿದ್ದಿದ್ದರೆ, ಅವರ ಬದಲಿಯಾಗಿ ಸಂಜು ಸ್ಯಾಮ್ಸನ್ ಹಾಗೂ ಜಸ್ಪ್ರೀತ್ ಬುಮ್ರಾ ತಂಡವನ್ನು ಕೂಡಿಕೊಂಡಿದ್ದಾರೆ.

ಇದರ ನಡುವೆ ಟಾಸ್ ಸಮಯದಲ್ಲಿ ಸೂರ್ಯ ನೀಡಿದ ಹೇಳಿಕೆ ಅಭಿಮಾನಿಗಳನ್ನು ಆತಂಕಗೊಳಿಸಿದೆ. ಅಷ್ಟಕ್ಕೂ ಸೂರ್ಯ ಹೇಳಿದ್ದೇನೆಂದರೆ, ಅನಾರೋಗ್ಯಕ್ಕೆ ತುತ್ತಾಗಿರುವ ಅಭಿಷೇಕ್ ಶರ್ಮಾ ನಮೀಬಿಯಾ ವಿರುದ್ಧ ಆಡುತ್ತಿಲ್ಲ, ಅವರು ಒಂದು ಅಥವಾ ಎರಡು ಪಂದ್ಯಗಳನ್ನು ತಪ್ಪಿಸಿಕೊಳ್ಳಬಹುದು ಎಂದರು. ಇದರರ್ಥ ಅಭಿಷೇಕ್ ಮುಂದಿನ ಪಂದ್ಯವನ್ನು ಆಡುವುದು ಅನುಮಾನವಾಗಿದೆ.

ಸೂರ್ಯಕುಮಾರ್ ಹೇಳಿದಂತೆ ಅಭಿಷೇಕ್ ಶರ್ಮಾ ಮುಂದಿನ ಪಂದ್ಯವನ್ನು ಆಡಲು ಸಾಧ್ಯವಾಗದಿದ್ದರೆ, ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ಅಭಿಷೇಕ್ ಶರ್ಮಾ ಗೈರಾಗಲಿದ್ದಾರೆ. ಇದು ತಂಡಕ್ಕೆ ದೊಡ್ಡ ಹೊಡೆತವಾಗಲಿದೆ. ಏಕೆಂದರೆ ಅಭಿಷೇಕ್ ಅದ್ಭುತ ಫಾರ್ಮ್ನಲ್ಲಿದ್ದರು. ಮತ್ತು ಪಾಕಿಸ್ತಾನದಂತಹ ತಂಡವನ್ನು ಎದುರಿಸುವಾಗ ಅಭಿಷೇಕ್ರಂತಹ ಬ್ಯಾಟ್ಸ್ಮನ್ನ ಅಗತ್ಯತೆ ತಂಡಕ್ಕೆ ಹೆಚ್ಚಿತ್ತು.

ಭಾರತ ತಂಡ ಮುಂದಿನ ಪಂದ್ಯ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಇನ್ನು ಮೂರು ದಿನಗಳ ಸಮಯಾವಕಾಶವಿದ್ದು ಅಭಿಷೇಕ್ ಅಷ್ಟರೊಳಗೆ ಗುಣಮುಖರಾಗಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ. ವಾಸ್ತವವಾಗಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅಭಿಷೇಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದು ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ಅವರು ಇನ್ನು ಪೂರ್ಣವಾಗಿ ಫಿಟ್ ಆಗಿಲ್ಲ ಎಂಬುದು ಮ್ಯಾನೇಜ್ಮೆಂಟ್ ನಿರ್ಧಾರವಾಗಿದೆ.