ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಟ್ರಾವಿಸ್ ಹೆಡ್
Travis Head Record: ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲೇ ಟ್ರಾವಿಸ್ ಹೆಡ್ ವಿಸ್ಫೋಟಕ ಸೆಂಚುರಿ ಸಿಡಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್ ವಾರ್ನರ್ ಬರೆದಿದ್ದ ವರ್ಲ್ಡ್ ರೆಕಾರ್ಡ್ ಅನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.
Updated on: Nov 22, 2025 | 3:07 PM

ಟೆಸ್ಟ್ ಕ್ರಿಕೆಟ್ನಲ್ಲೂ ಟ್ರಾವಿಸ್ ಹೆಡ್ (Travis Head) ಸಿಡಿಲಬ್ಬರ ಶುರುವಾಗಿದೆ. ಅದು ಕೂಡ ಆರಂಭಿಕನಾಗಿ. ಪರ್ತ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಮೊದಲ ಪಂದ್ಯದ ದ್ಬಿತೀಯ ಇನಿಂಗ್ಸ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದಿರುವ ಟ್ರಾವಿಸ್ ಹೆಡ್ ಸ್ಫೋಟಕ ಸೆಂಚುರಿ ಸಿಡಿಸಿದ್ದಾರೆ.

ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ನೀಡಿದ 205 ರನ್ಗಳ ಗುರಿ ಬೆನ್ನತ್ತಲು ಆಗಮಿಸಿದ ಟ್ರಾವಿಸ್ ಹೆಡ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್ನಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ಗೆ ಒತ್ತು ನೀಡಿದ ಹೆಡ್ 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಹಾಫ್ ಸೆಂಚುರಿಯೊಂದಿಗೆ ಸಿಡಿಲಬ್ಬರ ಮುಂದುವರೆಸಿದ ಟ್ರಾವಿಸ್ ಹೆಡ್ ಕೇವಲ 69 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗವಾಗಿ ಸೆಂಚುರಿ ಸಿಡಿಸಿದ ಆರಂಭಿಕ ದಾಂಡಿಗ ಎಂಬ ವಿಶ್ವ ದಾಖಲೆಯನ್ನು ಹೆಡ್ ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಹೆಸರಿನಲ್ಲಿತ್ತು. 2012 ರಲ್ಲಿ ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಾರ್ನರ್ 69 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಇದೀಗ ಈ ವಿಶ್ವ ದಾಖಲೆಯನ್ನು ಸರಿಗಟ್ಟುವ ಮೂಲಕ ಟ್ರಾವಿಸ್ ಹೆಡ್ ಅಗ್ರಸ್ಥಾನಕ್ಕೇರಿದ್ದಾರೆ.

ಅಷ್ಟೇ ಅಲ್ಲದೆ ಆ್ಯಶಸ್ ಇತಿಹಾಸದಲ್ಲೇ ಅತೀ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಆ್ಯಡಂ ಗಿಲ್ಕ್ರಿಸ್ಟ್ (57) ಅಗ್ರಸ್ಥಾನದಲ್ಲಿದ್ದು, ಇದೀಗ 69 ಎಸೆತಗಳ ಸೆಂಚುರಿಯೊಂದಿಗೆ ಟ್ರಾವಿಸ್ ಹೆಡ್ ಆ್ಯಶಸ್ನ ಸ್ಫೋಟಕ ಸೆಂಚುರಿ ಸರದಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಅಲಂಕರಿಸಿದ್ದಾರೆ.
